ಬೆಳಗಾವಿ: ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ನ (ಕೆಎಸ್‌ಡಿಎಲ್) ಲಾಭದಲ್ಲಿ ₹108.62 ಕೋಟಿ ಮೊತ್ತವನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಹಸ್ತಾಂತರಿಸಿದರು.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಪಾಟೀಲ, ‘ನಿಗಮ 2023-24ನೇ ಸಾಲಿನಲ್ಲಿ ₹362.07 ಕೋಟಿ ಲಾಭಗಳಿಸಿದೆ. ಅದರಲ್ಲಿ ₹108.62 ಕೋಟಿ ಸರ್ಕಾರಕ್ಕೆ ಹಾಗೂ ₹5 ಕೋಟಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದೇವೆ. ಕಾರ್ಖಾನೆ ಇತಿಹಾಸದಲ್ಲಿ ಇಷ್ಟು ಮೊತ್ತದ ಲಾಭಾಂಶ ನೀಡಿರುವುದು ಇದೇ ಮೊದಲು’ ಎಂದರು.
ಸಿದ್ದರಾಮಯ್ಯ ಮಾತನಾಡಿ, ‘ಸಾರ್ವಜನಿಕ ಉದ್ದಿಮೆಗಳು ಲಾಭದಾಯಕ ವಹಿವಾಟು ನಡೆಸುವುದು ಒಳ್ಳೆಯ ಬೆಳವಣಿಗೆ. ಐದು ವರ್ಷಗಳ ಹಿಂದೆ ₹15.91 ಕೋಟಿ ಲಾಭಾಂಶ ತಂದಿದ್ದ ನಿಗಮ ಈ ವರ್ಷ ಸಾರ್ವಜನಿಕ ಉದ್ದಿಮೆಗಳ ನಿಯಮದಂತೆ ತನ್ನ ಲಾಭಾಂಶದಲ್ಲಿ ಶೇ 30ರಷ್ಟನ್ನು ಸರ್ಕಾರಕ್ಕೆ ಕೊಟ್ಟಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಎಂ. ಪ್ರಶಾಂತ್, ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಕೆ.ಎಲ್. ರವೀಶ, ಗಂಗಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.