ADVERTISEMENT

ಬೆಂಗಳೂರು| ಕೆಎಸ್‌ಡಿಎಲ್‌: ಸರ್ಕಾರಕ್ಕೆ ₹135 ಕೋಟಿ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 16:08 IST
Last Updated 24 ಅಕ್ಟೋಬರ್ 2025, 16:08 IST
   

ಬೆಂಗಳೂರು: ಸಾರ್ವಜನಿಕ ವಲಯದ ಉದ್ದಿಮೆಯಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) 2024-25ನೇ ಸಾಲಿನ ಲಾಭಾಂಶದ ಪಾಲು ₹135 ಕೋಟಿಯನ್ನು ಸರ್ಕಾರಕ್ಕೆ ನೀಡಿದೆ.

ಕೆಎಸ್‌ಡಿಎಲ್‌ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚೆಕ್‌ ಹಸ್ತಾಂತರಿಸಿದ ಬಳಿಕ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ‘ಕೆಎಸ್‌ಡಿಎಲ್‌ 2024–25ನೇ ಸಾಲಿನಲ್ಲಿ ₹1,700 ಕೋಟಿ ವಹಿವಾಟು ನಡೆಸಿ, ಕಾರ್ಖಾನೆಯ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ, ₹451 ಕೋಟಿ ಲಾಭ ಗಳಿಸಿದೆ. ಲಾಭದಲ್ಲಿ ನಿಯಮದಂತೆ ಶೇ 30ರಷ್ಟು ಮೊತ್ತವನ್ನು ಸರ್ಕಾರಕ್ಕೆ ನೀಡಿದ್ದೇವೆ’ ಎಂದರು.

2022-23ರಲ್ಲಿ ಬಿಜೆಪಿ ಆಡಳಿತವಿತ್ತು. ಆಗ ಸರ್ಕಾರಕ್ಕೆ ₹54 ಕೋಟಿ ಲಾಭಾಂಶ ಕೊಡಲಾಗಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ 2023-24ರಲ್ಲಿ ₹108 ಕೋಟಿ ಹಸ್ತಾಂತರಿಸಲಾಗಿತ್ತು. ಈಗ ₹27 ಕೋಟಿ ಹೆಚ್ಚುವರಿ ನೀಡಲಾಗಿದೆ ಎಂದು ವಿವರ ನೀಡಿದರು.

ADVERTISEMENT

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಪ್ರಿಯಾಂಕ್‌ ಖರ್ಗೆ, ಡಾ.ಎಂ.ಸಿ.ಸುಧಾರ್‌, ಸಂತೋಷ್‌ ಲಾಡ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಪ್ರಶಾಂತ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.