ಬೆಂಗಳೂರು: ‘ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮವು (ಕೆಎಸ್‌ಡಿಎಲ್) ಮೇ ತಿಂಗಳಿನಲ್ಲಿ ₹186 ಕೋಟಿ ಮೊತ್ತದ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಕಂಪನಿಯ 108 ವರ್ಷಗಳ ಇತಿಹಾಸದಲ್ಲಿ, ತಿಂಗಳೊಂದರಲ್ಲಿ ಇಷ್ಟು ದೊಡ್ಡ ಮೊತ್ತದ ಮಾರಾಟ ನಡೆದಿರುವುದು ಇದೇ ಮೊದಲು’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದ್ದಾರೆ.
‘2024ರ ಸೆಪ್ಟೆಂಬರ್‌ನಲ್ಲಿ ಕೆಎಸ್‌ಡಿಎಲ್ ₹178 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿತ್ತು. ಈವರೆಗೆ ಅದೇ ಗರಿಷ್ಠ ಮಟ್ಟದ ಮಾರಾಟದ ದಾಖಲೆಯಾಗಿತ್ತು. ಕೆಎಸ್‌ಡಿಎಲ್ ಸಾಮಾನ್ಯವಾಗಿ ಪ್ರತಿ ತಿಂಗಳು ಸರಾಸರಿ ₹135 ಕೋಟಿಯಿಂದ ₹140 ಕೋಟಿಯಷ್ಟು ವಹಿವಾಟು ನಡೆಸುತ್ತದೆ. ಮೇ ತಿಂಗಳಿನಲ್ಲಿ ಈ ಸರಾಸರಿಗಿಂತಲೂ ₹41 ಕೋಟಿಗಳಷ್ಟು ಹೆಚ್ಚು ವಹಿವಾಟು ನಡೆಸಿದೆ’ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
‘ಮೇ ತಿಂಗಳಿನಲ್ಲಿ ಕಂಪನಿಗೆ ₹151.50 ಕೋಟಿ ವಹಿವಾಟಿನ ಗುರಿ ನೀಡಲಾಗಿತ್ತು. ಕಂಪನಿಯು ಅದಕ್ಕಿಂತಲೂ ₹35 ಕೋಟಿಯಷ್ಟು ಹೆಚ್ಚುವರಿ ವಹಿವಾಟು ನಡೆಸಿದೆ. ಇದರಲ್ಲಿ ರಫ್ತಿನ ಮೊತ್ತ ₹1.81 ಕೋಟಿ ಇದೆ. ರಫ್ತು ವಹಿವಾಟನ್ನು ವಾರ್ಷಿಕವಾಗಿ ₹150 ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದರು.
‘ಮೇ ತಿಂಗಳಿನಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲೇ ₹85 ಕೋಟಿಯಷ್ಟು ವಹಿವಾಟು ನಡೆದಿದೆ. ಕರ್ನಾಟಕ ಸೇರಿ ಉಳಿದೆಡೆ ₹100 ಕೋಟಿ ಮೌಲ್ಯದ ಉತ್ಪನ್ನಗಳು ಮಾರಾಟವಾಗಿವೆ. ಸಾಬೂನು, ಶವರ್ ಜೆಲ್, ಅಗರಬತ್ತಿಗಳಿಗೆ ವ್ಯಾಪಕ ಬೇಡಿಕೆ ಬರುತ್ತಿದೆ. ಸಂಸ್ಥೆಯಲ್ಲಿ ಗುಣಮಟ್ಟದ ಉತ್ಪಾದನೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡಿರುವ ಪ್ರಯತ್ನಗಳು ಫಲ ಕೊಡುತ್ತಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ, ‘ಎರಡು ವರ್ಷದಲ್ಲಿ ಕಂಪನಿಗೆಂದು ಯಾವುದೇ ಹೊಸ ಉಪಕರಣ ಅಥವಾ ಯಂತ್ರಗಳನ್ನು ಖರೀದಿಸಿಲ್ಲ. ಬದಲಿಗೆ ಕಾರ್ಯಕ್ಷಮತೆಯನ್ನು ಹೆಚ್ಚಿಸಲಾಗಿದೆ. ಪರಿಣಾಮವಾಗಿ ಉತ್ಪಾದಕತೆ ಹೆಚ್ಚಾಗಿದೆ. ಶೀಘ್ರದಲ್ಲೇ ಸುಗಂಧದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.