ADVERTISEMENT

ಕೆ–ಸೆಟ್‌: ಮಾನದಂಡ ಮರು ಪರಿಶೀಲಿಸಲು– ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 18:04 IST
Last Updated 18 ನವೆಂಬರ್ 2025, 18:04 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷಾ (ಕೆ–ಸೆಟ್‌) ಫಲಿತಾಂಶಗಳ ಘೋಷಣೆಯ ಕಾರ್ಯವಿಧಾನ ಮತ್ತು ಮಾನದಂಡಗಳನ್ನು ಮರು ಪರಿಶೀಲಿಸಿ’ ಎಂದು ಹೈಕೋರ್ಟ್‌, ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷಾ ಕೇಂದ್ರ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗಕಕ್ಕೆ ನಿರ್ದೇಶಿಸಿದೆ.

ಈ ಸಂಬಂಧ ನಗರದ ಎ.ಗೋಪಾಲ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, 2021ರಲ್ಲಿ ಕೆ–ಸೆಟ್‌ಗೆ ಹಾಜರಾಗಿದ್ದ ಅರ್ಜಿದಾರರನ್ನು ಯಶಸ್ವಿ ಎಂದು ಘೋಷಿಸಿ ಪ್ರಮಾಣ ಪತ್ರವನ್ನು ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.

‘ಫಲಿತಾಂಶಗಳನ್ನು ಘೋಷಿಸುವಾಗ, ಅಭ್ಯರ್ಥಿಗಳನ್ನು ವಿಷಯವಾರು ಮತ್ತು ವರ್ಗವಾರು ಅರ್ಹರು ಎಂದು ಪ್ರಮಾಣೀಕರಿಸುವಾಗ 1990ರ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ (ಮೀಸಲು ಮತ್ತು ನೇಮಕ ಇತ್ಯಾದಿ) ಕಾಯ್ದೆಯಲ್ಲಿ ಕಡ್ಡಾಯವಾಗಿ ನಿಗದಿಪಡಿಸಿರುವ ಮೀಸಲಾತಿ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.

ADVERTISEMENT

‘ವಿಷಯವಾರು ಮತ್ತು ಪ್ರವರ್ಗವಾರು ಹಂಚಿಕೆ ನಿಯಮಗಳಲ್ಲಿ 1990ರ ಪರಿಶಿಷ್ಟರ ಮೀಸಲು ಕಾಯ್ದೆಯಲ್ಲಿ ಎಸ್‌ಸಿಗೆ ನಿಗದಿಪಡಿಸಿರುವ ಶೇ 15, ಎಸ್‌ಟಿಗೆ ಶೇ3ರ ಮೀಸಲು ನೀತಿಯನ್ನು ಪಾಲನೆ ಮಾಡುತ್ತಿಲ್ಲ. ಇದರಿಂದ ಅನ್ಯಾಯವಾಗುತ್ತಿದೆ’ ಎಂದು ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಶ್ರೀಧರ ಪ್ರಭು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.