ADVERTISEMENT

ಪಾರಂಪರಿಕ ವೈದ್ಯ ಪದ್ಧತಿಯ ಹಬ್‌ ಬೆಂಗಳೂರು: ಯೋಗಿ ಆದಿತ್ಯನಾಥ್‌ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 21:33 IST
Last Updated 2 ಸೆಪ್ಟೆಂಬರ್ 2022, 21:33 IST
ಬೆಂಗಳೂರಿನ ನೆಲಮಂಗಲದ ಬಳಿ ಗುರುವಾರ ಹಮ್ಮಿಕೊಂಡಿದ್ದ ಪ್ರಕೃತಿ ಚಿಕಿತ್ಸಾ ಕೇಂದ್ರ ‘ಕ್ಷೇಮವನ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸನ್ಮಾನಿಸಿದರು. ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಇದ್ದರು  –ಪ್ರಜಾವಾಣಿ ಚಿತ್ರ. ಎಂ.ಎಸ್‌.ಮಂಜುನಾಥ್‌
ಬೆಂಗಳೂರಿನ ನೆಲಮಂಗಲದ ಬಳಿ ಗುರುವಾರ ಹಮ್ಮಿಕೊಂಡಿದ್ದ ಪ್ರಕೃತಿ ಚಿಕಿತ್ಸಾ ಕೇಂದ್ರ ‘ಕ್ಷೇಮವನ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸನ್ಮಾನಿಸಿದರು. ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಇದ್ದರು  –ಪ್ರಜಾವಾಣಿ ಚಿತ್ರ. ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಖ್ಯಾತಿಯ ಬೆಂಗಳೂರನ್ನು ಭಾರತದ ಪಾರಂಪರಿಕ ವೈದ್ಯ ಪದ್ಧತಿಯ ಹಬ್‌ ಆಗಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಶ್ರಮಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶ್ಲಾಘಿಸಿದರು.

ನೆಲಮಂಗಲ ಸಮೀಪದ ಮಹದೇವಪುರದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಪ್ರಕೃತಿ ಚಿಕಿತ್ಸಾ ಕೇಂದ್ರ ’ಕ್ಷೇಮವನ’ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಯೋಗ ಪರಂಪರೆ ವಿಶ್ವದ ಜನರನ್ನು ಒಗ್ಗೂಡಿಸಿದೆ. ಉತ್ತರ ಪ್ರದೇಶದಲ್ಲಿಭಾರತದ ಪಾರಂಪರಿಕ ವೈದ್ಯಕೀಯ ಪದ್ಧತಿಗೆ ಆದ್ಯತೆ ನೀಡಲಾಗಿದೆ. ಕರ್ನಾಟಕದಲ್ಲೂ ಅಂತಹ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಪಾರಂಪರಿಕ ಚಿಕಿತ್ಸಾ ಕೇಂದ್ರಗಳು ತಲೆ ಎತ್ತುತ್ತಿವೆ. ಅದರಲ್ಲಿ ಧರ್ಮಸ್ಥಳದ ಪಾತ್ರ ಮಹತ್ವದ್ದಾಗಿದೆ ಎಂದರು.

ADVERTISEMENT

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಮೃದ್ಧ ಮತ್ತು ಸುರಕ್ಷಿತ ಕರ್ನಾಟಕಕ್ಕಾಗಿ ಕೆಲಸ ಮಾಡುತ್ತಿದೆ. ಕರ್ನಾಟಕ ದೇಶದ ಬಲಿಷ್ಠ ಅರ್ಥ ವ್ಯವಸ್ಥೆಯ ರಾಜ್ಯವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ’ಲಕ್ಷಾಂತರ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು, ಬದುಕು ನಡೆಸಲು ವೀರೇಂದ್ರ ಹೆಗ್ಗಡೆ ಅವರು ನೆರವಾಗಿದ್ದಾರೆ. ಶಿಕ್ಷಣ ಕ್ಷೇತ್ರದ ಜತೆಗೆ ಪ್ರಕೃತಿ ಚಕಿತ್ಸೆಯ ಮೂಲಕ ಆರೋಗ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ.ಒತ್ತಡದ ಬದುಕಿಗೆ, ಮನಸ್ಸಿನ ನೆಮ್ಮದಿಗೆ ಕ್ಷೇಮವನ ದಾರಿ ತೋರಲಿದೆ‘ ಎಂದರು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ’ಬದುಕಿನ ಜಂಜಡಗಳಿಂದ ಜನರು ವಿಚಲಿತರಾಗದಂತೆ ನೋಡಿಕೊಳ್ಳುವುದೇ ಸಂತರ ಕೆಲಸ. ಅಂತಹ ಕೆಲಸವನ್ನು ಯೋಗಿ ಆದಿತ್ಯನಾಥರು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದಾರೆ. ಅದರ ಫಲವಾಗಿ ಉತ್ತರ ಪ್ರದೇಶ ಇಂದು ಭಯಮುಕ್ತ ರಾಜ್ಯವಾಗಿದೆ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇಮವನ ರಾಜಧಾನಿಗೆ ಹತ್ತಿರವಿದೆ. ಇಲ್ಲಿನ ಜನರ ಅಪೇಕ್ಷೆ ಈಡೇರಿಸಲಾಗಿದೆ. ಅಲ್ಲಿ ಔಷಧ, ಮಾತ್ರೆಗಳಿರುವುದಿಲ್ಲ. ರೋಗ ಬರದಂತೆ ತಡೆಯುವ ಜೀವನ ಪದ್ಧತಿ ಹೇಳಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಕೆ.ಸುಧಾಕರ್, ಬೈರತಿ ಬಸವರಾಜ, ಆನಂದ್‌ಸಿಂಗ್, ಸಂಸದ ಬಚ್ಚೇಗೌಡ, ಹೇಮಾವತಿ ಹೆಗ್ಗಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.