ADVERTISEMENT

ಕೆಎಸ್‌ಒಯು: ಕುಲಪತಿ ಆಯ್ಕೆ, ಸಮಿತಿ ಸಭೆ ಇಂದು

ಕೆಎಸ್‌ಒಯು: ಇದೇ 10ರಂದು ಪ್ರೊ.ಡಿ.ಶಿವಲಿಂಗಯ್ಯ ಅವಧಿ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:15 IST
Last Updated 7 ಮಾರ್ಚ್ 2019, 19:15 IST
   

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು) ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರ ಅಧಿಕಾರಾವಧಿ ಮಾರ್ಚ್‌ 10ರಂದು ಕೊನೆಗೊಳ್ಳುತ್ತಿದೆ. ನೂತನ ಕುಲಪತಿ ಆಯ್ಕೆಗೆ ಶೋಧನಾ ಸಮಿತಿ ಶುಕ್ರವಾರ ಸಭೆ ನಡೆಸಲಿದೆ.

ಶೋಧನಾ ಸಮಿತಿಗೆ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಸಮಿತಿಯಲ್ಲಿ ಜಾನಪದ ವಿ.ವಿ ಕುಲಪತಿ ಪ್ರೊ.ಡಿ.ಬಿ.ನಾಯಕ್‌, ಮೈಸೂರು ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಎಸ್‌.ಎನ್.ಹೆಗ್ಡೆ, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್‌) ನಿರ್ದೇಶಕ ಡಾ.ಎಸ್‌.ಸಿ.ಶರ್ಮಾ ಸದಸ್ಯ ರಾಗಿದ್ದಾರೆ. ಮಾರ್ಚ್‌ 8ರಂದು ಸಮಿತಿಯ ಸಭೆ ನಡೆಯಲಿದ್ದು, ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆಗಳಿವೆ. ಆಯ್ಕೆಯಾದ ಮೂವರ ಹೆಸರನ್ನು ರಾಜ್ಯ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗುತ್ತದೆ. ಬೆಂಗಳೂರು ವಿಶ್ವವಿದ್ಯಾಲಯ ಮಾಜಿ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಹೆಸರು ಪ್ರಬಲವಾಗಿ ಕೇಳಿಬಂದಿದೆ.

ಭ್ರಷ್ಟಾಚಾರ ಆರೋಪ: ಪ್ರೊ.ಮೈಲಾರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪವಿದ್ದು, ಕುಲಪತಿ ಹುದ್ದೆಗೆ ಅವರ ಹೆಸರು ಪ್ರಬಲವಾಗಿ ಕೇಳಿಬಂದಿರುವುದು ವಿವಾದಕ್ಕೆ ಕಾರಣವಾಗಿದೆ. ಕೆಎಸ್‌ಒಯುವಿನಲ್ಲಿ ನಡೆದಿದ್ದ ಭ್ರಷ್ಟಾಚಾರ, ವಿ.ವಿ ಅನುದಾನ ಆಯೋಗದ (ಯುಜಿಸಿ) ನಿಯಮಾವಳಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 2013–14ನೇ ಸಾಲಿನಿಂದ ಮಾನ್ಯತೆ ರದ್ದಾಗಿತ್ತು. ಹಾಲಿ ಕುಲಪತಿ ಪ್ರೊ.ಡಿ.ಶಿವಲಿಂಗಪ್ಪ ಅವರ ಸತತ ಪ್ರಯತ್ನದಿಂದಾಗಿ 2018–19ನೇ ಸಾಲಿನಿಂದ 5 ವರ್ಷಗಳ ಅವಧಿಗೆ ಯುಜಿಸಿ ಮಾನ್ಯತೆ ನೀಡಿದೆ.

ADVERTISEMENT

ಈಗ, ನೂತನ ಕುಲಪತಿ ಹುದ್ದೆಗೆ ಭ್ರಷ್ಟಾಚಾರ ಆರೋಪ ಇದ್ದವರ ಹೆಸರು ಕೇಳಿ ಬಂದಿರುವ ವಿಚಾರ ವಿ.ವಿ ಅಂಗಳದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ.

ಪ್ರೊ.ಮೈಲಾರಪ್ಪ ಅವರ ವಿರುದ್ಧ ಕೃತಿಚೌರ್ಯ, ಪಿಎಚ್‌.ಡಿ ಪ್ರಬಂಧವನ್ನು ನಕಲು ಮಾಡಿ, ಸಿಕ್ಕಿಬಿದ್ದ ಆರೋಪ ಇದೆ. ಈ ವಿವಾದ ಹೈಕೋರ್ಟ್‌ ಮೆಟ್ಟಿಲೇರಿತ್ತು. ಕುಲಸಚಿವ ಹುದ್ದೆಯಿಂದ ಕೆಳಗಿಳಿಯುವಂತೆ ಕೋರ್ಟ್‌ ಆದೇಶಿಸಿತ್ತು. ‘ದೋಷಪೂರಿತ ಮತ್ತು ಕಳಂಕಿತ ವ್ಯಕ್ತಿ. ವಿದ್ಯಾರ್ಥಿಗಳ ಹಿತಾಸಕ್ತಿ ಹೇಗೆ ಕಾಪಾಡಬಲ್ಲರು’ ಎಂದು ನ್ಯಾಯಮೂರ್ತಿಗಳಾದ ಎನ್‌.ಕುಮಾರ್, ವಿ.ಸೂರಿ ಅಪ್ಪಾರಾವ್‌ ಪ್ರಶ್ನಿಸಿದ್ದರು. ಅಲ್ಲದೇ, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ₹19.58 ಲಕ್ಷ ಹಣದಲ್ಲಿ ಅವ್ಯವಹಾರ ನಡೆಸಿದ ಆರೋಪವೂ ಇದೆ.

ಕುಲಪತಿ ಹುದ್ದೆಗೆ ಅರ್ಜಿ ಹಾಕಿರುವುದನ್ನು ಖಚಿತಪಡಿಸಿರುವ ಮೈಲಾರಪ್ಪ ಅವರು, ‘ನನ್ನ ವಿರುದ್ಧ ಕೆಲವರು ಇಲ್ಲದ ಆರೋಪಗಳನ್ನು ಮಾಡಿದ್ದಾರೆ. ನಾನು ಎಂದೂ ಭ್ರಷ್ಟಾಚಾರ ಮಾಡಿದವನಲ್ಲ. ಕೈಯಿಂದ ಹಣ ಕಳೆದುಕೊಂಡಿದ್ದೇನೆ ಹೊರತೂ ಯಾರಿಂದಲೂ ಎಂಟಾಣೆ ತೆಗೆದುಕೊಂಡಿಲ್ಲ’ ಎಂದರು.

ವಿಸ್ತರಣೆಗೆ ಕೋರಿಕೆ

ಹಾಲಿ ಕುಲಪತಿ ಪ್ರೊ.ಶಿವಲಿಂಗಯ್ಯ ಅವರು ಒಂದು ವರ್ಷ ಅವಧಿಗೆ ಅಧಿಕಾರ ವಿಸ್ತರಣೆ ಮಾಡುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

*ದೂರಶಿಕ್ಷಣದಲ್ಲಿ ನನಗೆ 20 ವರ್ಷಗಳಿಗೂ ಹೆಚ್ಚಿನ ಅನುಭವವಿದೆ. ಹಾಗಾಗಿ, ಕುಲಪತಿ ಹುದ್ದೆಗೆ ಅರ್ಹತೆಯಿದೆ

- ಪ್ರೊ.ಬಿ.ಸಿ.ಮೈಲಾರಪ್ಪ, ನಿರ್ದೇಶಕ, ದೂರಶಿಕ್ಷಣ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.