ADVERTISEMENT

ಸಾರಿಗೆ ಸಂಸ್ಥೆಗಳಿಗೆ ಹೊರೆ ಭಾರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 19:03 IST
Last Updated 9 ಫೆಬ್ರುವರಿ 2021, 19:03 IST

ಬೆಂಗಳೂರು: ನಷ್ಟದಲ್ಲಿ ಮುಳುಗಿರುವ ಸಾರಿಗೆ ಸಂಸ್ಥೆಗಳ ಮೇಲೆ ಡೀಸೆಲ್‌ ದರ ಹೆಚ್ಚಳದ ಬರೆ ಕೂಡ ಬೀಳಲಿದೆ.

ಸಾರಿಗೆ ಸಂಸ್ಥೆಗಳು ಸಗಟು ರೂಪದಲ್ಲಿ ಕಂಪನಿಗಳಿಂದ ಡೀಸೆಲ್‌ ಖರೀದಿ ಮಾಡುತ್ತಿವೆ. 15 ದಿನಗಳಿಗೊಮ್ಮೆ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಫೆ.1ರಿಂದ ಲೀಟರ್‌ಗೆ ₹75 ದರದಲ್ಲಿ ಖರೀದಿ ಮಾಡಲಾಗುತ್ತಿದೆ. ಮುಂದಿನ ದರದಲ್ಲಿ ಆಗುವ ವ್ಯತ್ಯಾಸ ಎಷ್ಟು ಎಂಬುದು ಫೆ.15ರ ನಂತರ ಗೊತ್ತಾಗಲಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ದಿನಕ್ಕೆ 480 ಕಿಲೋ ಲೀಟರ್, ಬಿಎಂಟಿಸಿ ಬಸ್‌ಗಳಿಗೆ 250 ಕಿಲೋ ಲೀಟರ್ ಡೀಸೆಲ್ ಬಳಕೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಕೋವಿಡ್‌ ನಂತರ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದ ಸ್ಥಿತಿಗೆ ಸಾರಿಗೆ ಸಂಸ್ಥೆಗಳು ಬಂದಿವೆ. ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್‌ಗೆ ಮಾರಾಟ ತೆರಿಗೆ ವಿನಾಯಿತಿ ಕೋರಿ ರಾಜ್ಯ ಸರ್ಕಾರಕ್ಕೆ ಕೆಎಸ್‌ಆರ್‌ಟಿಸಿ ಮೂಲಕ ಸಾರಿಗೆ ಸಂಸ್ಥೆಗಳು ಈ ಹಿಂದೆಯೇ ಮನವಿ ಸಲ್ಲಿಸಿದ್ದವು. ಈಗ ಮತ್ತೆ ದರ ಏರಿಕೆಯಾದರೆ ಬಸ್‌ಗಳನ್ನು ರಸ್ತೆಗೆ ಇಳಿಸಲು ಯೋಚಿಸುವ ಸ್ಥಿತಿ ಬರಲಿದೆ ಎನ್ನುತ್ತಾರೆ ಅಧಿಕಾರಿಗಳು.

ಮತ್ತಷ್ಟು ಸಂಕಷ್ಟಕ್ಕೆ ಲಾರಿ ಮಾಲೀಕರು

ಕೋವಿಡ್‌ ಕಾರಣದಿಂದ ಬಾಡಿಗೆ ಇಲ್ಲದೆ ಪರದಾಡುತ್ತಿರುವ ಲಾರಿ ಮಾಲೀಕರನ್ನು ಡೀಸೆಲ್ ದರ ಏರಿಕೆ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

‘ಕೋವಿಡ್ ಸಂಕಷ್ಟದ ಕಾರಣ ಎಲ್ಲಾ ಲಾರಿಗಳಿಗೂ ಬಾಡಿಗೆ ಸಿಗುತ್ತಿಲ್ಲ. ಈಗ ಡೀಸೆಲ್‌ ಏರಿಕೆ ಆಗಿರುವುದನ್ನು ನೋಡಿದರೆ ಲಾರಿಗಳನ್ನು ರಸ್ತೆಗೆ ಇಳಿಸುವುದು ಹೇಗೆ ಎಂಬ ಯೋಚನೆ ಕಾಡುತ್ತಿದೆ’ ಎಂದು ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಹೇಳಿದರು.

‘ಬಾಡಿಗೆ ಸಿಗುವುದೇ ಕಷ್ಟವಾಗಿರುವಾಗ ಬಾಡಿಗೆ ಜಾಸ್ತಿ ಮಾಡುವ ಸ್ಥಿತಿಯಲ್ಲೂ ಇಲ್ಲ. ಒಂದು ಕಿಲೋ ಮೀಟರ್‌ಗೆ ₹30 ಡೀಸೆಲ್‌ ವೆಚ್ಚ ತಗುಲುತ್ತಿದೆ. ನಿರ್ವಹಣೆ ಸೇರಿ ₹40 ಖರ್ಚಾಗಲಿದೆ. ಡೀಸೆಲ್ ದರ ಏರಿಕೆಯಿಂದ ಈಗ ಮತ್ತಷ್ಟು ಜಾಸ್ತಿಯಾಗಲಿದೆ. ಅಷ್ಟು ಬಾಡಿಗೆ ಕೇಳಿದರೆ ಕೊಡುವವರು ಯಾರು. ಕೇಂದ್ರ ಸರ್ಕಾರಕ್ಕೆ ಈ ಸಮಸ್ಯೆಗಳು ಅರ್ಥವಾಗುತ್ತಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಡೀಸೆಲ್ ದರ ಏರಿಕೆ ಖಂಡಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಭೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.