ADVERTISEMENT

ಕೋವಿಡ್ ಹಿನ್ನೆಲೆ: ರಾಜಹಂಸ ಬಸ್‌ನ ಸೀಟುಗಳ ನಡುವೆ ಅಂತರ

ಸೀಟುಗಳ ಮರು ಜೋಡಣೆ: ಕೆಎಸ್‌ಆರ್‌ಟಿಸಿಯಿಂದ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 15:52 IST
Last Updated 21 ಆಗಸ್ಟ್ 2020, 15:52 IST
ಅಂತರ ಕಾಪಾಡಿಕೊಂಡು ಮೂರು ಸಾಲುಗಳಲ್ಲಿ ಸೀಟು ಅಳವಡಿಕೆ ಮಾಡಿರವುದು
ಅಂತರ ಕಾಪಾಡಿಕೊಂಡು ಮೂರು ಸಾಲುಗಳಲ್ಲಿ ಸೀಟು ಅಳವಡಿಕೆ ಮಾಡಿರವುದು   

ಬೆಂಗಳೂರು: ಕೋವಿಡ್ ಕಾರಣದಿಂದ ಪ್ರಯಾಣಿಕರ ನಡುವೆ ಅಂತರ ಕಾಪಾಡಲು ಹೊಸಮಾರ್ಗ ಕಂಡುಕೊಂಡಿರುವ ಕೆಎಸ್‌ಆರ್‌ಟಿಸಿ, ರಾಜಹಂಸ ಬಸ್‌ ಸೀಟುಗಳನ್ನು ಮರು ಜೋಡಣೆ ಮಾಡಿದೆ.

‌39 ಸೀಟುಗಳಿದ್ದ ಬಸ್‌ನಲ್ಲಿ 29 ಸೀಟುಗಳನ್ನು ಅಳವಡಿಸಲಾಗಿದೆ. ಒಂದು ಅಡ್ಡ ಸಾಲಿನಲ್ಲಿ ಮಧ್ಯದಲ್ಲಿ ಅಂತರ ಬಿಟ್ಡು ಎರಡು ಬದಿಯಲ್ಲಿ ತಲಾ ಎರಡು ಸೀಟುಗಳನ್ನು ಅಳವಡಿಸಲಾಗಿತ್ತು. ಈಗ ನಾಲ್ಕರ ಬದಲಿಗೆ ಮೂರು ಸಿಟುಗಳನ್ನು ಜೋಡಿಸಿ ಎರಡೂ ಬದಿಯಲ್ಲಿ ಅಂತರ ಉಳಿಸಲಾಗಿದೆ. ಮಧ್ಯದ ಸೀಟಿನಿಂದ ಎರಡೂ ಬದಿಯ ಸೀಟುಗಳ ನಡುವೆ ತಲಾ ಒಂದು ಅಡಿಗೂಹೆಚ್ಚು ಅಂತರ ಇರುವ ಕಾರಣ ಓಡಾಟಕ್ಕೆ ತೊಂದರೆ ಆಗುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

‘ಮೂರು ಪ್ರಯಾಣಿಕರು ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡೇ ಪ್ರಯಾಣ ಮಾಡಲು ಇದು ಅನುಕೂಲವಾಗಿದೆ. ಬೆಂಗಳೂರು–ಮೈಸೂರು ನಡುವೆ ಈ ಬಸ್ ಸಂಚರಿಸುತ್ತಿದೆ. ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ಬೇರೆ ಬಸ್‌ಗಳನ್ನು ಇದೇ ರೀತಿ ಪರಿವರ್ತಿಸಬೇಕೆ ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು’ ಎಂದು ಹೇಳಿದ್ದಾರೆ.

ADVERTISEMENT

‘ಹವಾನಿಯಂತ್ರಿತ (ಎ.ಸಿ) ಐರಾವತ ಬಸ್‌ಗಳಲ್ಲಿ ಈ ಪ್ರಯೋಗ ಮಾಡುತ್ತಿಲ್ಲ. ಸದ್ಯಕ್ಕೆ ಎ.ಸಿ ಬಸ್‌ಗಳಿಗೆ ಹತ್ತುವ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ರಾಜಹಂಸ ಬಸ್‌ಗಳಲ್ಲಿ ಪ್ರಯೋಗ ಮಾಡಲಾಗಿದೆ. ಕೆಂಪು ಬಸ್‌ಗಳಲ್ಲಿ 54 ಸೀಟುಗಳಿದ್ದರೂ ಅಂತರ ಕಾಯ್ದುಕೊಂಡು 30 ಜನರಷ್ಟೇ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಸ್‌ಗಳ ಸೀಟುಗಳ ಮರು ಜೋಡಣೆ ಬಗ್ಗೆ ಇನ್ನೂ ಆಲೋಚನೆ ನಡೆಸಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.