ADVERTISEMENT

ಸಂಚಾರಕ್ಕೆ ಸಜ್ಜಾಗುತ್ತಿವೆ ಸಾರಿಗೆ ಬಸ್‌: ಮೇ 3ರ ಬಳಿಕ ಸೇವೆ ಪುನರಾರಂಭ ಸಾಧ್ಯತೆ

ಹಸಿರು ವಲಯದಲ್ಲಿ ಅವಕಾಶ ಸಾಧ್ಯತೆ– ಶಿವಯೋಗಿ ಸಿ.ಕಳಸದ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 8:39 IST
Last Updated 29 ಏಪ್ರಿಲ್ 2020, 8:39 IST
ಶಿವಯೋಗಿ ಸಿ. ಕಳಸದ
ಶಿವಯೋಗಿ ಸಿ. ಕಳಸದ   

ಚಿತ್ರದುರ್ಗ: ರಾಜ್ಯದ ಹಸಿರು ವಲಯದಲ್ಲಿ ಲಾಕ್‌ಡೌನ್ ಇನ್ನಷ್ಟು ಸಡಿಲವಾಗಿರುವುದರಿಂದ ಬಸ್‌ ಸಂಚಾರ ಆರಂಭಿಸಲು ಸಾರಿಗೆ ಸಂಸ್ಥೆಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಸರ್ಕಾರ ಅನುಮತಿ ನೀಡಿದರೆ ಮೇ 3ರ ಬಳಿಕ ಸೇವೆ ಒದಗಿಸಲಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ನಗರದ ಬಸ್‌ ನಿಲ್ದಾಣ ಹಾಗೂ ಡಿಪೊಗೆ ಬುಧವಾರ ಭೇಟಿ ನೀಡಿ ಈ ವಿಷಯ ತಿಳಿಸಿದರು. ಸೇವೆಗೆ ಸಜ್ಜಾಗುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.

ಜಿಲ್ಲೆಯೊಳಗಷ್ಟೇ ಸಂಚಾರ:‘ಮೇ 3 ಬಳಿಕ ಲಾಕ್‌ಡೌನ್‌ ಇನ್ನಷ್ಟು ಸಡಿಲವಾಗುವ ಸಾಧ್ಯತೆ ಇದೆ. ಸಾರಿಗೆ ಬಸ್‌ಗಳನ್ನು ರಸ್ತೆಗೆ ಇಳಿಸುವ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಹಸಿರು ವಲಯದ 14 ಜಿಲ್ಲೆಗಳಲ್ಲಿ ಸಾರಿಗೆ ಸಂಚಾರಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ. ಕರ್ತವ್ಯಕ್ಕೆ ಮರಳುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದ್ದು, ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ’ ಎಂದು ಕಳಸದ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ADVERTISEMENT

‘ಹಸಿರು ವಲಯದಲ್ಲಿ ಅವಕಾಶ ಸಿಕ್ಕರೆ ಜಿಲ್ಲೆಯೊಳಗೆ ಮಾತ್ರ ಬಸ್‌ ಸಂಚರಿಸುತ್ತವೆ. ಅಂತರ ಕಾಯ್ದುಕೊಳ್ಳುವ ಬಗ್ಗೆ ಪ್ರಯಾಣಿಕರಿಗೆ ತಿಳಿವಳಿಕೆ ನೀಡಲಾಗುತ್ತದೆ. ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪ್ರಯಾಣಿಕರ ಸಂಖ್ಯೆಯನ್ನು ಮರು ನಿಗದಿಪಡಿಸಲಾಗುತ್ತದೆ. ನೂಕು ನುಗ್ಗಲು ಉಂಟಾಗದಂತೆ ಎಚ್ಚರ ವಹಿಸಲಿದ್ದು, ಸರತಿ ಸಾಲಿನಲ್ಲಿ ನಿಂತು ಬಸ್‌ ಏರುವಂತೆ ಸೂಚನೆ ನೀಡಲಾಗುತ್ತದೆ. ಸಿಬ್ಬಂದಿಗೆ ಮಾಸ್ಕ್‌, ಸ್ಯಾನಿಟೈಸರ್‌, ಕೈಗವಸು ನೀಡಲಾಗುತ್ತದೆ’ ಎಂದು ವಿವರಿಸಿದರು.

ಸಾವಿರ ಕೋಟಿ ನಷ್ಟ:‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ, ವಾಯುವ್ಯ ಹಾಗೂ ಬಿಎಂಟಿಸಿ ಸೇರಿ ರಾಜ್ಯದಲ್ಲಿ 25 ಸಾವಿರ ಬಸ್‌ಗಳಿದ್ದು, 1.32 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಒಂದೂವರೆ ತಿಂಗಳಿಂದ ಬಸ್ಸುಗಳು ಸಂಚರಿಸದಿರುವ ಪರಿಣಾಮ ಅಂದಾಜು ಒಂದು ಸಾವಿರ ಕೋಟಿಗೂ ಅಧಿಕ ಆದಾಯ ಖೋತಾ ಆಗಿದೆ’ ಎಂದು ಹೇಳಿದರು.

‘ಲಾಕ್‌ಡೌನ್‌ಗೂ ಮೊದಲೇ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದವು. ಹೀಗಾಗಿ, ಸಾರಿಗೆ ಇಲಾಖೆ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಸಿಬ್ಬಂದಿಗೆ ವೇತನ ನೀಡುವುದು ಕೂಡ ಕಷ್ಟವಾಗಿದ್ದು, ವೇತನ ಕಡಿತ ಅನಿವಾರ್ಯವಾಗಿದೆ. ಸಂಚಾರ ಆರಂಭಿಸಿದರೂ ಆದಾಯ ನಿರೀಕ್ಷಿತ ಮಟ್ಟದಲ್ಲಿ ಸಿಗದು’ ಎಂದು ಹೇಳಿದರು.

ದರ ಪರಿಷ್ಕರಣೆ ಇಲ್ಲ:‘ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಂದು ಬಸ್‌ನಲ್ಲಿ 25 ಜನ ಮಾತ್ರ ಸಂಚರಿಸಬೇಕಾಗುತ್ತದೆ. ಡೀಸೆಲ್‌ ಹಾಗೂ ಇತರ ವೆಚ್ಚ ಹೊರೆಯಾಗುವ ಸಾಧ್ಯತೆ ಇದೆ. ಆದರೂ, ಪ್ರಯಾಣ ದರ ಪರಿಷ್ಕರಣೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳು ಪ್ರತಿ ವರ್ಷ ₹ 40 ಕೋಟಿಗೂ ಹೆಚ್ಚು ಟೋಲ್‌ ಶುಲ್ಕ ಪಾವತಿಸುತ್ತವೆ. ನಷ್ಟವನ್ನು ತಗ್ಗಿಸುವ ಉದ್ದೇಶದಿಂದ ಟೋಲ್‌ ಶುಲ್ಕ ಸಂಗ್ರಹದಿಂದ ವಿನಾಯಿತಿ ನೀಡುವಂತೆ ಕೋರಲಾಗಿದೆ. ಮೋಟಾರು ವಾಹನ ತೆರಿಗೆಯಿಂದಲೂ ವಿನಾಯಿತಿ ನೀಡುವಂತೆ ಮನವಿ ಮಾಡಲಾಗಿದೆ. ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ನೆರವು ನೀಡುವ ನಿರೀಕ್ಷೆ ಇದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.