ADVERTISEMENT

ಕೊರೊನಾ: ಸಾರಿಗೆ ನೌಕರರಿಗೆ ಸಿಗದ ವೇತನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 19:59 IST
Last Updated 21 ಜುಲೈ 2020, 19:59 IST
ಕೆಎಸ್‌ಆರ್‌ಟಿಸಿ ಬಸ್
ಕೆಎಸ್‌ಆರ್‌ಟಿಸಿ ಬಸ್   

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ನಾಲ್ಕೂ ಸಾರಿಗೆ ಸಂಸ್ಥೆಗಳ ನೌಕರರಿಗೆ ಜೂನ್ ತಿಂಗಳ ಸಂಬಳ ಇನ್ನೂ ಪಾವತಿಯಾಗಿಲ್ಲ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಈ ಸಂಸ್ಥೆಗಳು ಅನುದಾನ ದೊರೆಯುವ ನಿರೀಕ್ಷೆಯಲ್ಲಿವೆ.

ಮೊದಲ ಹಂತದ ಲಾಕ್‌ಡೌನ್ ತೆರವುಗೊಂಡ ನಂತರ ಸಾರಿಗೆ ಬಸ್‌ಗಳ ಸಂಚಾರ ಇದ್ದರೂ ವೆಚ್ಚ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಕರೆದೊಯ್ಯಬೇಕಿರುವ ಕಾರಣ ಡೀಸೆಲ್ ವೆಚ್ಚಕ್ಕೂ ಸಾಕಾಗುತ್ತಿಲ್ಲ.

ನಾಲ್ಕೂ ಸಂಸ್ಥೆಗಳ ನೌಕರರಿಗೆ ವೇತನ ನೀಡಲು ₹326 ಕೋಟಿ ಅನುದಾನ ಬೇಕು. ಅನುದಾನ ಕೋರಿ ಸರ್ಕಾರಕ್ಕೆ ಕೆಎಸ್‌ಆರ್‌ಟಿಸಿ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ತಿಂಗಳು ಕೂಡ ವಿಳಂಬವಾಗಿಯೇ ಜೂ.15ರ ನಂತರ ವೇತನ ಪಾವತಿಯಾಗಿತ್ತು. ಈ ತಿಂಗಳುಹಣಕಾಸು ಇಲಾಖೆ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ.

ADVERTISEMENT

‘ಅನುದಾನ ಬಿಡುಗಡೆ ಬಗ್ಗೆ ಚರ್ಚೆ ನಡೆದಿದೆ. ಎರಡು ಮೂರು ದಿನಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದರು.

ಆಂಬುಲೆನ್ಸ್‌ ಚಾಲನೆಗೂ ಸಿದ್ಧ

‘ಎರವಲು ಸೇವೆ ಮೇಲೆ ಬೇರೆ ಇಲಾಖೆಗೆ ನಿಯೋಜಿಸಿದರೂ ಕೆಲಸ ಮಾಡಲು ಸಿದ್ಧರಿದ್ದೇವೆ’ ಎಂದು ಕರ್ನಾಟಕ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

‘ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗಳಲ್ಲಿ ನೌಕರರ ಕೊರತೆ ಇದ್ದರೆ ಸಂಸ್ಥೆಗಳಲ್ಲಿರುವ ಅರ್ಹ ನೌಕರರನ್ನು ಬಳಕೆ ಮಾಡಿಕೊಳ್ಳಬಹುದು. ಕೆಲಸ ಮಾಡದೆ ಸಂಬಳ ಕೇಳಲು ನಮಗೂ ಇಷ್ಟ ಇಲ್ಲ’ ಎಂದು ಹೇಳಿದರು.

‘ಪಿಪಿಇ ಕಿಟ್‌, ವಿಮಾ ಸೌಲಭ್ಯ ಸೇರಿಸುರಕ್ಷತೆ ಒದಗಿಸಿದರೆಆಂಬುಲೆನ್ಸ್ ಚಾಲನೆಗೂ ಇಲ್ಲ ಎನ್ನುವುದಿಲ್ಲ. ಆಂಧ್ರ ಪ್ರದೇಶದಲ್ಲಿ ಸಾರಿಗೆ ನೌಕರರನ್ನು ಬೇರೆ ಇಲಾಖೆಗಳ ಸೇವೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೇ ಮಾದರಿಯನ್ನು ರಾಜ್ಯ ಸರ್ಕಾರವೂ ಅನುಸರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.