ಸಿಎಂ ಜೊತೆಗಿನ ಮಾತುಕತೆ
ಬೆಂಗಳೂರು: ವೇತನ ಪರಿಷ್ಕರಣೆ, ಹೆಚ್ಚುವರಿ ವೇತನ ಬಾಕಿ ಬಿಡುಗಡೆಗೆ ಪಟ್ಟು ಹಿಡಿದಿರುವ ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ನಡೆಸಿದ ಮಾತುಕತೆ ವಿಫಲವಾದವು.
ವೇತನ ಪರಿಷ್ಕರಣೆಯನ್ನು 2024ರ ಜನವರಿ ಒಂದಕ್ಕೆ ಅನ್ವಯವಾಗುವಂತೆ ನಡೆಸಬೇಕು. ಹಿಂದಿನ ಪರಿಷ್ಕರಣೆಯ ನಂತರದ 38 ತಿಂಗಳ ಹೆಚ್ಚುವರಿ ವೇತನ ಬಾಕಿ ನೀಡಬೇಕು. ಎರಡು ಪ್ರಮುಖ ಬೇಡಿಕೆಗಳಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟದ ಮುಖಂಡರು ಪಟ್ಟು ಹಿಡಿದರು.
ಸಭೆಯ ನಂತರ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್, ‘ವೇತನ ಪರಿಷ್ಕರಣೆಯ ಬಗ್ಗೆ ಮುಖ್ಯಮಂತ್ರಿ ಒಲವು ತೋರಲಿಲ್ಲ. ಹಿಂದಿನ ಪರಿಷ್ಕರಣೆಯ ಬಾಕಿಯಲ್ಲಿ 14 ತಿಂಗಳ ಮೊತ್ತವಷ್ಟೇ ನೀಡುವುದಾಗಿ ಒಪ್ಪಿಗೆ ನೀಡಿದರು. ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪದ ಕಾರಣ ಮುಷ್ಕರ ನಡೆಸುವ ನಮ್ಮ ನಿಲುವನ್ನು ಮುಖ್ಯಮಂತ್ರಿಗೆ ಸ್ಪಷ್ಟಪಡಿಸಿದ್ದೇವೆ’ ಎಂದರು.
ನಿಗಮಗಳಲ್ಲಿ ಹಿಂದಿನಿಂದಲೂ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ನಡೆಸಲಾಗುತ್ತಿತ್ತು. ತಡವಾಗಿ ಪರಿಷ್ಕರಣೆ ನಡೆದರೂ ಹಿಂದಿನ ದಿನಾಂಕದಿಂದಲೇ ಅನ್ವಯವಾಗುತ್ತಿತ್ತು. ಈ ಬಾರಿ ಏಕಾಏಕಿ ಸರ್ಕಾರ ಆ ಪದ್ಧತಿಯನ್ನು ಬದಲಾಯಿಸಲು ಹೊರಟಿರುವುದನ್ನು ಒಪ್ಪಲು ಸಾಧ್ಯವಿಲ್ಲ ಹಿಂದಿನ ಪರಿಷ್ಕರಣೆಯ ಹಿಂಬಾಕಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಮಂಜುನಾಥ್ ಮಾತನಾಡಿ, ‘18 ತಿಂಗಳ ಹಿಂದೆಯೇ ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದೆವು. ವೇತನ ಪರಿಷ್ಕರಣೆಗೆ ಸರ್ಕಾರ ಈಗಲೂ ಸಿದ್ಧವಿಲ್ಲ. ಮತ್ತೆ ಮಾತುಕತೆಗೆ ಆಹ್ವಾನಿಸಿದರೂ, ಹೋಗದಿರಲು ನಿರ್ಧರಿಸಿದ್ದೇವೆ. ನಮ್ಮ ಹಕ್ಕುಗಳ ರಕ್ಷಣೆಗೆ ಮುಷ್ಕರವನ್ನೇ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿಐಟಿಯು), ಕೆಎಸ್‌ಆರ್‌ಟಿಸಿ ಎಸ್‌ಸಿ, ಎಸ್‌ಟಿ ಎಂಪ್ಲಾಯಿಸ್ ಯೂನಿಯನ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಗಳು ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.