ADVERTISEMENT

ಸಿದ್ದರಾಮಯ್ಯ ವಿರುದ್ಧ ಪಂಚಮಸಾಲಿ ಶ್ರೀ ಸುಪಾರಿ: ಶಿವರಾಮು ಆರೋಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 7:57 IST
Last Updated 14 ಡಿಸೆಂಬರ್ 2024, 7:57 IST
   

ಮೈಸೂರು: ‘ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲೆಂದು ಬಿಜೆಪಿಯವರಿಂದ ಸುಪಾರಿ ತೆಗೆದುಕೊಂಡಿದ್ದಾರೆ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು ದೂರಿದರು.

ಲಿಂಗಾಯತ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗ 2ಎಗೆ ಸೇರಿಸದಂತೆ ಆಗ್ರಹಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ಖಂಡಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಇಲ್ಲಿನ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಲವು ವರ್ಷಗಳ ಹಿಂದೆಯಷ್ಟೆ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದ ಸ್ವಾಮೀಜಿ ಈಗ ದ್ವೇಷ ಕಾರುತ್ತಿದ್ದಾರೆ. ಬಿಜೆಪಿಯವರು, ಸಿದ್ದರಾಮಯ್ಯ ಅವರ ತಪ್ಪಿಲ್ಲದಿದ್ದರೂ ಮುಡಾ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣವನ್ನು ಮುಂದಿಟ್ಟುಕೊಂಡು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದರು. ಆದರೆ, ಇದರಿಂದ ಪ್ರಯೋಜನ ಆಗದಿದ್ದಕ್ಕೆ ಸ್ವಾಮೀಜಿಯನ್ನು ಎತ್ತಿ ಕಟ್ಟಿದ್ದಾರೆ’ ಎಂದು ದೂರಿದರು.

ADVERTISEMENT

‘ಒಂದು ಸಮುದಾಯವನ್ನು ಸಿದ್ದರಾಮಯ್ಯ ವಿರುದ್ಧ ಎತ್ತಿಕಟ್ಟುವ ಷಡ್ಯಂತ್ರ ಸ್ವಾಮೀಜಿ ಅವರದ್ದಾಗಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಅನುಸರಿಸುತ್ತಿದ್ದಾರೆ. ಜಾತಿ– ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸದ ಮೂಲಕ ಅಪನಂಬಿಕೆ ಸೃಷ್ಟಿಸುತ್ತಿದ್ದಾರೆ. ಸೌಹಾರ್ದ ಹಾಳಾಗಲೆಂದು ಕುಮ್ಮಕ್ಕು ಕೊಡುತ್ತಿದ್ದಾರೆ. ರಾಜಕೀಯ ಪುಡಾರಿಯ ರೀತಿ ಅವರು ಮಾತನಾಡುತ್ತಿರುವುದು ಸರಿಯಲ್ಲ’ ಎಂದರು. ‘ಅವರಂತೆ ಮಾತನಾಡಲು ನಮಗೂ ಬರುತ್ತದೆ. ಆದರೆ, ಅದಕ್ಕೆ ಅವಕಾಶ ಕೊಡುವ ಕೆಲಸವನ್ನು ಅವರು ಮಾಡಬಾರದು’ ಎಂದು ಹೇಳಿದರು.

‘ಲಿಂಗಾಯತ ಪಂಚಮಸಾಲಿ ಸಮಾಜ ಎಲ್ಲ ರೀತಿಯಲ್ಲೂ ಮುಂದುವರಿದಿದೆ. ಅವರನ್ನು ಹಿಂದುಳಿದ ವರ್ಗ–2ಎಗೆ ಸೇರಿಸಲು ನಮ್ಮ ಪ್ರಬಲ ವಿರೋಧವಿದೆ’ ಎಂದು ತಿಳಿಸಿದರು.

‘ಸ್ವಾಮೀಜಿಯು ಮುಖ್ಯಮಂತ್ರಿಯನ್ನು ಅವಹೇಳನ ಮಾಡುತ್ತಿರುವುದು ಖಂಡನೀಯ. ಅವರು ಒಂದು ಸಮಾಜದ ಸ್ವಾಮೀಜಿಯಾ ಅಥವಾ ಎಲ್ಲರಿಗೂ ಸೇರಿದವರಾ ಎಂಬುದನ್ನು ಸ್ಪಷ್ಟಪಡಿಸಲಿ. ಒಂದು ಜಾತಿಯ ಪರವಾಗಿ ಗುರುತಿಸಿಕೊಂಡರೆ ಅಂಥವರು ಸನ್ಯಾಸಿಯಾಗಲು ಯೋಗ್ಯರಲ್ಲ; ಹಗಲುವೇಷ ಹಾಕಿದವರು ಎನ್ನಬೇಕಾಗುತ್ತದೆ’ ಎಂದು ಟೀಕಿಸಿದರು.

ಅಹಿಂದ ಮುಖಂಡ ಶಿವಣ್ಣ ಮಾತನಾಡಿ, ‘ಪಂಚಮಸಾಲಿ ಶ್ರೀ ಸರ್ಕಾರಕ್ಕೆ ಕೆಟ್ಟ ಹೆಸರು ತರಲು, ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಕುತಂತ್ರ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಜಾತಿವಾದಿಗಳ ಹುನ್ನಾರದ ಭಾಗವಾಗಿ ಷಡ್ಯಂತ್ರ ಮಾಡುತ್ತಿದ್ದಾರೆ. ಸಂಚು ರೂಪಿಸುತ್ತಿದ್ದಾರೆ. ಜಾಂತಿ ಮುಂದಿಟ್ಟುಕೊಂಡು ಅಶಾಂತಿ ಸೃಷ್ಟಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಲಿಂಗಾಯತ ಪಂಚಮಸಾಲಿ ಸಮಾಜದವರು ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಮುಂದುವರಿದಿದ್ದರೂ ಹಿಂದುಳಿದ ವರ್ಗ 2ಎ ಮೀಸಲಾತಿ ಕೇಳುತ್ತಿರುವುದು ಸರಿಯಲ್ಲ’ ಎಂದರು.

ಕಾಂಗ್ರೆಸ್‌ ನಗರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಿವಿಧ ಸಮಾಜಗಳ ಮುಖಂಡರಾದ ಯೋಗೇಶ್ ಉಪ್ಪಾರ್, ಎಸ್.ರವಿನಂದನ್, ರಾಜೇಶ್, ಹರೀಶ್‌ ಮೊಗಣ್ಣ, ಖಲೀಂ, ಕೆಂಪಶೆಟ್ಟಿ, ಸುನೀಲ್, ಮಲ್ಲೇಶ್, ಲಿಂಗರಾಜು, ದೇವಣ್ಣ, ಪಾಪಣ್ಣ, ಕೃಷ್ಣಪ್ಪ, ಹುಚ್ಚೇಗೌಡ, ಕೋಟೆ ಶಿವಣ್ಣ, ಸೋಮಣ್ಣ, ಕಾಂತರಾಜು, ರಾಜಶೇಖರ್, ಚಂದ್ರಪ್ಪ, ವಿಶ್ವನಾಥ್, ನಂಜುಂಡ ಹಾಗೂ ಲಕ್ಷ್ಮಿ ಪಾಲ್ಗೊಂಡಿದ್ದರು.

ನಿರ್ಣಯಗಳು

  • ಬಲಾಢ್ಯರು ಹಿಂದುಳಿದ ವರ್ಗ 2ಬಿಯಲ್ಲಿ ಶೇ 5ರಷ್ಟು ಹಾಗೂ ಸಾಮಾನ್ಯ ವರ್ಗದ ಶೇ 50ರಲ್ಲೂ ಪಾಲು ಪಡೆಯುತ್ತಿದ್ದಾರೆ. 199 ಜಾತಿಗಳಿರುವ ಪ್ರವರ್ಗ 2ಎಗೆ ಸೇರಲು ಲಿಂಗಾಯತ ಪಂಚಮಸಾಲಿ ಸೇರಿದಂತೆ ಇತರ ಮುಂದುವರಿದ ಜಾತಿಗಳು ಕಣ್ಣಿಟ್ಟಿರುವುದು ಸರಿಯಲ್ಲ.

  • ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಂಕಿ–ಅಂಶಗಳನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಅದರ ಅಂಕಿ–ಅಂಶಗಳ ಪ್ರಕಾರವೇ ಹೊಸ ಮೀಸಲಾತಿ ಪ್ರಮಾಣ ಪ್ರಕಟಿಸಬೇಕು.

  • ಹಿಂದುಳಿದವರ ವಿರೋಧ ನಿರ್ಲಕ್ಷಿಸಿ ಲಿಂಗಾಯತ ಪಂಚಮಸಾಲಿ ಹಾಗೂ ಇತರ ಮುಂದುವರಿದ ಜಾತಿಗಳನ್ನು ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರಿಸಲು ಸರ್ಕಾರಗಳು ಕ್ರಮ ಕೈಗೊಂಡರೆ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯಿಂದ ರಾಜ್ಯದಾದ್ಯಂತ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.