ADVERTISEMENT

2ಎ ಮೀಸಲಾತಿ: ಕೂಡಲಸಂಗಮ ಶ್ರೀ ಧರಣಿ ಆರಂಭ

2ಎ ಮೀಸಲಾತಿ ಕೊಟ್ಟರೆ ಹಿನ್ನಡೆ ಆಗುವುದೇ: ಸ್ವಾಮೀಜಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 21:01 IST
Last Updated 21 ಏಪ್ರಿಲ್ 2022, 21:01 IST
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಪಡಿಸಿ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗುರುವಾರ ಧರಣಿ ಆರಂಭಿಸಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಇತರರಿದ್ದರು
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಪಡಿಸಿ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗುರುವಾರ ಧರಣಿ ಆರಂಭಿಸಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಇತರರಿದ್ದರು   

ಬಾಗಲಕೋಟೆ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡದಂತೆ ಮುಖ್ಯಮಂತ್ರಿಗಳ ಮೇಲೆ ಯಾರಾದರೂ ಒತ್ತಡ ಹಾಕಿದ್ದಾರೆಯೇ? ಅದರಿಂದ ಅವರಿಗೆ ರಾಜಕೀಯವಾಗಿ ಹಿನ್ನಡೆ ಆಗಲಿದೆಯೇ? ಎಂಬುದನ್ನು ಬಸವರಾಜ ಬೊಮ್ಮಾಯಿ ಬಹಿರಂಗಪಡಿಸಲಿ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ಕೂಡಲಸಂಗಮದ ಐಕ್ಯಮಂಟಪದ ಎದುರು ಗುರುವಾರದಿಂದ ಧರಣಿ ಆರಂಭಿಸಿರುವ ಅವರು, ಅದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಬಜೆಟ್ ಅಧಿವೇಶನದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸುವುದಾಗಿ ಸರ್ಕಾರ ಹೇಳಿತ್ತು. ಈಗ ಮಾತು ತಪ್ಪಿದೆ. ಹೀಗಾಗಿ ಅನಿರ್ದಿಷ್ಟ ಅವಧಿಗೆ ಧರಣಿ ಆರಂಭಿಸಿದ್ದೇನೆ’ ಎಂದರು.

ADVERTISEMENT

ಡಿಸೆಂಬರ್ 12ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಡೆದ ಸಮಾಜದ ಶಾಸಕರು ಹಾಗೂ ಸಚಿವರ ದುಂಡು ಮೇಜಿನ ಸಭೆಯಲ್ಲಿ ಮೀಸಲಾತಿ ಕೊಡುವುದಾಗಿ ಮುಖ್ಯಮಂತ್ರಿ ಮಾತು ಕೊಟ್ಟಿದ್ದರು. ಅದನ್ನು ತಪ್ಪಿದ್ದಾರೆ. ಅಲ್ಲಿಯೇ ಘೋಷಿಸಿದ್ದಂತೆ ಈಗ ಮರಳಿ ಹೋರಾಟ ಆರಂಭಿಸಿದ್ದೇನೆ. ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು
ತಿಳಿಸಿದರು.

ಸಂಗಮನಾಥ ದೇವಾಲಯದ ಮುಖ್ಯಸ್ಥರು ಸ್ವತಃ ಮುಖ್ಯಮಂತ್ರಿ ಆಗಿ ರುವುದರಿಂದ ಅವರ ಗಮನ ಸೆಳೆಯಲು ಇಲ್ಲಿಯೇ ಧರಣಿ ನಡೆಸುತ್ತಿರುವುದಾಗಿಸ್ವಾಮೀಜಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಧರಣಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.