ADVERTISEMENT

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ರದ್ದು ಮಾಡಿ: ಕುಂ.ವೀರಭದ್ರಪ್ಪ

ಕೊರೊನಾ ಸಂದರ್ಭದಲ್ಲಿ ಪ್ರಶಸ್ತಿಗಾಗಿ ಸಾಲುಗಟ್ಟಿ ನಿಂತಿರುವುದು ವಿಷಾದದ ಸಂಗತಿ ಎಂದ ಕಾದಂಬರಿಕಾರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 2:28 IST
Last Updated 19 ಅಕ್ಟೋಬರ್ 2020, 2:28 IST
   

ಕಲಬುರ್ಗಿ: ‘ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ರದ್ದು ಮಾಡಬೇಕು. ಕೊರೊನಾ ಸಂದರ್ಭದಲ್ಲಿ ಪ್ರಶಸ್ತಿಗಾಗಿ ಸಾಲುಗಟ್ಟಿ ನಿಂತಿರುವುದು ವಿಷಾದದ ಸಂಗತಿ. ಹೀಗಾಗಿ ಪ್ರಶಸ್ತಿಯನ್ನು ಅನುಮಾನದಿಂದ ನೋಡುವಂತಾಗಿದೆ’ ಎಂದು ಹಿರಿಯ ಕಾದಂಬರಿಕಾರ ಕುಂ.ವೀರಭದ್ರಪ್ಪ ವಿಷಾದಿಸಿದರು.

ನಗರದ ರಂಗಾಯಣ ಆವರಣದಲ್ಲಿ ಭಾನುವಾರ ನಡೆದ ಸಾಹಿತ್ಯ ಸಾರಥ್ಯ ಮೂರನೆ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಸಾಹಿತ್ಯ ಸಾರಥಿ’ ಪ್ರಶಸ್ತಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಶಸ್ತಿ ಜೊತೆಗೆ ಬಂದ ಹಣವನ್ನು ಸಮಾಜದ ಒಳಿತಿಗಾಗಿ ಬಳಸುವಗುಣ ಬೆಳೆಸಿಕೊಳ್ಳಬೇಕು. ಕೊಡುವ ಕ್ರಿಯೆ ಕರ್ನಾಟಕದ ಸ್ಥಾಯಿಭಾವ. ಈ ನೆಲಕ್ಕೆ ನಾವು ಋಣಿಯಾಗಿರಬೇಕು ಎಂದರು.

ಬಾಯಿ ಮುಚ್ಚಿಸುವುದಕ್ಕಾಗಿ ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಾಗಿ ಸರ್ಕಾರ ಪ್ರಶಸ್ತಿ ಕೊಡಲಾಗುತ್ತಿದೆ. ನಿರ್ವೀರ್ಯತೆ, ನಿಷ್ಕ್ರಿಯತೆಯನ್ನು ಹುಟ್ಟು ಹಾಕಬಲ್ಲದು. ಹೀಗಾಗಿ ಈ ಬಗ್ಗೆ ಸಣ್ಣ ಅನುಮಾನ ಇಟ್ಟುಕೊಳ್ಳಬೇಕು ಎಂದು ಸಾಹಿತಿಗಳಿಗೆ ಹೇಳಿದರು.

ADVERTISEMENT

ವ್ಯವಸ್ಥೆಯ ವಿರುದ್ಧ ಮಾತನಾಡುವ, ಬರೆಯುವ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯವಾಗುತ್ತದೆ. ಲೇಖಕ ವಿರೋಧ ಪಕ್ಷದ ಧುರೀಣನಾಗಿರಬೇಕು. ಹೊಗಳ ಭಟ್ಟರನ್ನು, ಸರ್ಕಾರಿ ಕೃಪಾಪೋಷಿತ ಪ್ರಶಸ್ತಿ ನಿರಾಕರಿಸಬೇಕು ಎಂದರು.

ರಾಷ್ಟ್ರಕೂಟ ದೊರೆ ನೃಪತುಂಗ ಸಮಾಜಮುಖಿ ಅರಸನಾಗಿದ್ದ. ದಕ್ಷಿಣ ಭಾರತಕ್ಕೆ ಇವರ ಕೊಡುಗೆ ಅಪಾರ. ನೃಪತುಂಗನ ಕಾಲದಲ್ಲಿ ರಚಿತವಾದ ಕವಿರಾಜ ಮಾರ್ಗ ಕೃತಿ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ ಎಂದು ತಿಳಿಸಿದರು.

ಖಜೂರಿ ಮಠದ ಕೋರಣೇಶ್ವರ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಡಾ. ಅಮೂಲ ಪತಂಗೆ ಮುಖ್ಯ ಅತಿಥಿಗಳಾಗಿದ್ದರು.

ಶಿವರಾಯ ದೊಡ್ಡಮನಿ, ಸಿದ್ಧರಾಮ ಹೊನ್ಕಲ್, ಸಂಧ್ಯಾ ಹೊನಗುಂಟಿಕರ, ಡಾ. ನಾಗೇಂದ್ರ ಮಸೂತಿ, ಎಸ್.ಎನ್. ದಂಡಿನಕುಮಾರ, ಪಿ.ಎಂ.ಮಠ, ಮಹೇಶ ಬಡಿಗೇರ, ಮಹ್ಮದ್ ಅಯಾಜುದ್ದೀನ್, ಎಚ್.ಎಸ್. ಬೇನಾಳ ಅವರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಾಹಿತ್ಯ ಸಾರಥಿ ಸಂಪಾದಕ ಬಿ.ಎಚ್. ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಿಸಿದರು.

ಡಾ. ಎಚ್.ಟಿ. ಪೋತೆ, ಪಿ.ಎಂ.‌ಮಣ್ಣೂರ, ಮಹಿಪಾಲರೆಡ್ಡಿ ಮುನ್ನೂರ, ಚಾಮರಾಜ ದೊಡ್ಡಮನಿ, ಸುರೇಶ ಬಡಿಗೇರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.