ವಕ್ಫ್
ಬೆಂಗಳೂರು: ವಕ್ಫ್ ಆಸ್ತಿಗಳ ಒತ್ತುವರಿ ತೆರವು ಮತ್ತು ಮರುವಶಕ್ಕೆ ಸಂಬಂಧಿಸಿದಂತೆ 2008ರಿಂದ 2024ರವರೆಗೆ ರಾಜ್ಯದಾದ್ಯಂತ ಒಟ್ಟು 3,519 ರೈತರು ಮತ್ತು ಭೂಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಅತಿಹೆಚ್ಚು 2,001 ನೋಟಿಸ್‌ಗಳನ್ನು ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲೇ ನೀಡಲಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈವರೆಗೆ 1,404 ನೋಟಿಸ್‌ಗಳನ್ನು ನೀಡಲಾಗಿದೆ.
ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ 2008ರಲ್ಲಿ ಅಧಿಕಾರಕ್ಕೆ ಬಂದಿತ್ತು. ರಚನೆಯಾದ ಕೆಲವೇ ದಿನಗಳಲ್ಲಿ ವಕ್ಫ್ ಆಸ್ತಿ ಅಕ್ರಮ ಪರಭಾರೆ ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದ ಸರ್ಕಾರ, ನೋಟಿಸ್ ನೀಡುವ ಪ್ರಕ್ರಿಯೆಯನ್ನು ಮುಖ್ಯಮಂತ್ರಿಯವರ ತವರು ಜಿಲ್ಲೆ ಶಿವಮೊಗ್ಗದಿಂದಲೇ ಆರಂಭಿಸಿತ್ತು. ವಕ್ಫ್ ಆಸ್ತಿಗಳ ಅಕ್ರಮ ಪರಭಾರೆ ಮತ್ತು ಒತ್ತುವರಿಗೆ ಸಂಬಂಧಿಸಿದಂತೆ ಅನ್ವರ್ ಮಾಣಿಪ್ಪಾಡಿ ಸಮಿತಿಯ ವರದಿ ಸಲ್ಲಿಕೆಯಾದ ನಂತರ ಈ ಪ್ರಕ್ರಿಯೆಯನ್ನು ಚುರುಕುಗೊಳಿಸಿತ್ತು.
2013ರ ಮೇನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ನಂತರ ನೋಟಿಸ್ ನೀಡುವ ಪ್ರಕ್ರಿಯೆ ನಿಂತಿತ್ತು. 2015ರಲ್ಲಿ ವಕ್ಫ್ ಆಸ್ತಿಗಳ ಎರಡನೇ ಭೂಮಾಪನ ಪ್ರಕ್ರಿಯೆ ಆರಂಭಿಸಿದ ನಂತರ, ಕಾಂಗ್ರೆಸ್ ಸರ್ಕಾರವೂ ನೂರಾರು ರೈತರು ಮತ್ತು ಭೂಮಾಲೀಕರಿಗೆ ನೋಟಿಸ್ ನೀಡಿತ್ತು.
ವಕ್ಫ್ ಆಸ್ತಿಗಳ ಎರಡನೇ ಭೂಮಾಪನ ಪ್ರಕ್ರಿಯೆ 2019ರಲ್ಲಿ ಪೂರ್ಣಗೊಂಡಿತ್ತು. ರಾಜ್ಯದಾದ್ಯಂತ ಎಷ್ಟು ಆಸ್ತಿಗಳು ಒತ್ತುವರಿಯಾಗಿವೆ ಮತ್ತು ಒತ್ತುವರಿಯಾದ ಜಮೀನುಗಳ ವಿಸ್ತೀರ್ಣದ ನಿಖರ ಮಾಹಿತಿ ದೊರೆತಿತ್ತು. ಆಗ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು.
ಬಿಜೆಪಿಯ ಶಾಸಕ ಕುಮಾರ್ ಬಂಗಾರಪ್ಪ ಅವರು ರಾಜ್ಯ ವಿಧಾನಸಭೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದರು. ಕುಮಾರ್ ಬಂಗಾರಪ್ಪ ಅವರು ವಿಧಾನಮಂಡಲದಲ್ಲಿ ಮಂಡಿಸಿದ್ದ, ಸಮಿತಿಯ ಐದೂ ವರದಿಗಳಲ್ಲಿ, ‘ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕು. ನೋಟಿಸ್ ಜಾರಿ ಮಾಡಿ ವಿವರಣೆ ಪಡೆದುಕೊಳ್ಳುವ ಜತೆಗೆ ಅಗತ್ಯ ಪ್ರಕರಣಗಳಲ್ಲಿ ವಕ್ಫ್ ಆಸ್ತಿಯನ್ನು ಮರುವಶಕ್ಕೆ ಪಡೆದುಕೊಳ್ಳಬೇಕು’ ಎಂದು ಶಿಫಾರಸು ಮಾಡಲಾಗಿತ್ತು. ಇದರ ಅನ್ವಯವೇ ರೈತರು ಮತ್ತು ಭೂಮಾಲೀಕರಿಗೆ ವಕ್ಫ್ ಮಂಡಳಿಯು ನೋಟಿಸ್ ನೀಡುವ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿತ್ತು. 2019–2023ರ ಬಿಜೆಪಿ ಸರ್ಕಾರದ ಅವಧಿಯಲ್ಲಿ 1,800ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿತ್ತು.
2023ರಲ್ಲಿ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಮೊದಲ ಏಳು ತಿಂಗಳು ನೋಟಿಸ್ ನೀಡುವ ಪ್ರಕ್ರಿಯೆಯನ್ನು ಬಹುತೇಕ ನಿಲ್ಲಿಸಿತ್ತು. ಆದರೆ 2024ರ ಫೆಬ್ರುವರಿ ನಂತರ ನೂರಾರು ನೋಟಿಸ್ ನೀಡಿತು. ಒಟ್ಟು ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ಹಿಂದಿನ 16 ವರ್ಷಗಳಲ್ಲಿ ಒಟ್ಟು 3,404 ನೋಟಿಸ್‌ಗಳನ್ನು ನೀಡಿವೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ 114 ನೋಟಿಸ್‌ಗಳನ್ನು ನೀಡಲಾಗಿದೆ.
‘ರಾಜ್ಯದಲ್ಲಿ ಖಬರಸ್ಥಾನಗಳಿಗೆ ಬೇಡಿಕೆ ಇರುವ ಜಿಲ್ಲೆಗಳಲ್ಲಿ ಜಮೀನು ಗುರುತಿಸಿ, ಮಂಜೂರು ಮಾಡಲು ತುರ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯ ಸಮಿತಿ 2020ರ ಮಾರ್ಚ್ 19ರಂದು ವಿಧಾನಸಭೆಯಲ್ಲಿ ಮಂಡಿಸಿದ ವರದಿಯಲ್ಲಿ ಶಿಫಾರಸು ಮಾಡಿತ್ತು.
‘ಮುಸ್ಲಿಂ ಸಮುದಾಯಕ್ಕೆ ಖಬರಸ್ಥಾನಗಳ ಅಗತ್ಯವಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯು 363 ಪ್ರಸ್ತಾವನೆ ಸಲ್ಲಿಸಿದೆ’ ಎಂದು ಸಮಿತಿ ಉಲ್ಲೇಖಿಸಿತ್ತು. ಬಸವರಾಜ ಬೊಮ್ಮಾಯಿ ಅವರು ಸಿ.ಎಂ ಆಗಿದ್ದಾಗ 2022ರ ಡಿಸೆಂಬರ್‌ನಲ್ಲಿ ವಿಧಾನಸಭೆಗೆ ಉತ್ತರಿಸಿ, ‘ಖಬರಸ್ಥಾನ ಮಂಜೂರಾತಿಗೆ ಕ್ರಮವಹಿಸಲು ಸೂಚಿಸಲಾಗಿದೆ’ ಎಂದಿದ್ದರು.
ಯಾವ ಜಿಲ್ಲೆಗಳಿಂದ ಎಷ್ಟು ಖಬರಸ್ತಾನಗಳಿಗೆ ಬೇಡಿಕೆ ಬಂದಿದೆ ಮತ್ತು ಬೇಡಿಕೆಗೆ ಕ್ರಮವಹಿಸಲು ಸೂಚಿಸಲಾಗಿದೆ ಎಂಬ ವಿವರವನ್ನು ಆಗ ಅಲ್ಪ ಸಂಖ್ಯಾತರ ಕಲ್ಯಾಣ ಸಚಿವೆ ಆಗಿದ್ದ ಶಶಿಕಲಾ ಜೊಲ್ಲೆ ವಿಧಾನಸಭೆಗೆ ನೀಡಿದ್ದರು. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಖಬರಸ್ಥಾನಗಳಿಗೆ ಬಂದಿರುವ ಒಟ್ಟು ಬೇಡಿಕೆಗಳ ಸಂಖ್ಯೆ 400 ದಾಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.