ADVERTISEMENT

ಪಿಎಸ್ಐ ನೇಮಕಾತಿಗೆ‌ ಮರು ಪರೀಕ್ಷೆ: ಕುಮಾರಸ್ವಾಮಿ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 11:29 IST
Last Updated 29 ಏಪ್ರಿಲ್ 2022, 11:29 IST
ಕುಮಾರಸ್ವಾಮಿ ಅವರನ್ನು ‌ಹುಬ್ಬಳ್ಳಿಯಲ್ಲಿ‌ ಭೇಟಿಯಾದ ಪಿಎಸ್ಐ ಆಕಾಂಕ್ಷಿಗಳು
ಕುಮಾರಸ್ವಾಮಿ ಅವರನ್ನು ‌ಹುಬ್ಬಳ್ಳಿಯಲ್ಲಿ‌ ಭೇಟಿಯಾದ ಪಿಎಸ್ಐ ಆಕಾಂಕ್ಷಿಗಳು   

ಹುಬ್ಬಳ್ಳಿ: ಪಿಎಸ್ಐ ನೇಮಕಾತಿ‌ ವಿಚಾರದಲ್ಲಿ ಅಕ್ರಮ ನಡೆದ ಆರೋಪ ‌ಕೇಳಿ ಬಂದ ಕಾರಣ ಸರ್ಕಾರ ಮರು ಪರೀಕ್ಷೆ ನಡೆಸುವುದಾಗಿ ಹೇಳಿದ್ದು, ಇದಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ‌ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಸರ್ಕಾರದ ನಿರ್ಧಾರದಿಂದ
ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಪ್ರಕರಣ ಇನ್ನು ತನಿಖೆಯ ಹಂತದಲ್ಲಿದೆ‌‌. ಈಗಲೇ ಮರುಪರೀಕ್ಷೆ ಅಂದರೆ ಹೇಗೆ‌ ಎಂದು ಪ್ರಶ್ನಿಸಿದರು.

ಮುಂದೆ ಸರಿಯಾಗಿ ಪರೀಕ್ಷೆ ಮಾಡುತ್ತೀರಿ ಅನ್ನೋದಕ್ಕೆ ಏನು ಗ್ಯಾರಂಟಿ. ತನಿಖೆಯಲ್ಲಿ ಎಲ್ಲವೂ ಹೊರ ಬರಬೇಕು. ಯಾವ ಆಧಾರದ ಮೇಲೆ ಅಕ್ರಮ ಎಸಗಿದ್ದಾರೆ ಎನ್ನುವುದು ಗೊತ್ತಾಗಬೇಕು.
2011ರ ಕೆಪಿಎಸ್‌ಸಿ ಬ್ಯಾಚ್ ಅಭ್ಯರ್ಥಿಗಳು ಹೇಗೆ ವಂಚಿತರಾಗಿದ್ದರೊ; ಅದು ಇಂದಿಗೂ ಮುಕ್ತಾಯವಾಗಿಲ್ಲ.
ಯಾರೋ ಕೊಟ್ಟಿರುವ ದೂರಿನ ಆಧಾರದ ಮೇಲೆ ಈ ರೀತಿ ಮಾಡಬಾರದು‌ ಎಂದರು.

ADVERTISEMENT

ಸರ್ಕಾರದ ನಿರ್ಧಾರದಿಂದ ಸರಿಯಾಗಿ ಓದಿ ಪರೀಕ್ಷೆ ಬರೆದವರಿಗೆ ತೊಂದರೆ ಆಗಬಾರದು. ಸರಿಯಾದ ಮುಂಜಾಗ್ರತಾ ಕ್ರಮ ವಹಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.ರೇವಣ್ಣ ಅವರ ಕಾಲದಲ್ಲಿ ಹಣ ಪಡೆದಿರುವ ಬಗ್ಗೆ ಒಂದೇ ಒಂದು ಉದಾಹರಣೆ ಕೊಡಿ‌ ನೋಡೊಣ. ಈ ವ್ಯವಸ್ಥೆ ಸರಿಪಡಿಸದಿದ್ದರೆ ಕೇವಲ ದುಡ್ಡಿದ್ದವರಿಗೆ ಮಾತ್ರ ಉನ್ನತ ಹುದ್ದೆಗಳು ಸಿಗುತ್ತವೆ. ಹಣ ಕೊಟ್ಟು ಕೆಲಸ ಪಡೆದವರು ಎಷ್ಟು ಬಡಜನರ ಪರವಾಗಿ ಕೆಲಸ ಮಾಡುತ್ತಾರೆ‌ ಎಂದು ಪ್ರಶ್ನಿಸಿದರು.

ಬಡ ಮಕ್ಕಳ ಭವಿಷ್ಯವನ್ನು ಸರಿಪಡಿಸಲು ಪ್ರಾಮಾಣಿಕತೆ ಇರಬೇಕು. ಸುಲಭವಾಗಿ ಹಣ ಮಾಡಬೇಕು ಅನ್ನೋದೇ ಆಡಳಿತ ವ್ಯವಸ್ಥೆ ವಿಚಾರ. ನಾನು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಮನವಿ ಮಾಡುವೆ. ಮರು ಪರೀಕ್ಷೆ ನಿರ್ಧಾರ ಸರಿಯಲ್ಲ ಎನ್ನುವುದನ್ನು ಹೇಳುತ್ತೇನೆ ಎಂದರು.

ಅಕ್ರಮದಲ್ಲಿ ಯಾರು ನಿಜವಾದ ಆರೋಪಿಗಳಿದ್ದಾರೆ ಅವರ ವಿರುದ್ಧ ಕ್ರಮ ಆಗಲಿ‌.
ಅದರ ಆಧಾರದ ಮೇಲೆ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಬೇಕು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯ ಆಗಬಾರದು ಎಂದು ಹೇಳಿದರು.

ಪಿಎಸ್ಐ ಪರೀಕ್ಷೆ ಬರೆದ ಕೆಲ ವಿದ್ಯಾರ್ಥಿಗಳು ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ ನಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾದರು. ಮರುಪರೀಕ್ಷೆ ನಡೆಸಿದರೆ ನಮಗೆ ಅನ್ಯಾಯವಾಗುತ್ತದೆ. ಈ ಕುರಿತು ಸರ್ಕಾರದ ಜೊತೆ ಮಾತನಾಡಬೇಕು ಎಂದು ಕೋರಿದರು.

ನಿಮ್ಮ ಪರವಾಗಿ‌ ನಾನಿದ್ದೇನೆ. ಆತಂಕ ಪಡಬೇಡಿ. ಮುಖ್ಯಮಂತ್ರಿ ಜೊತೆ ಮಾತನಾಡುವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.