ADVERTISEMENT

ಒಬಿಸಿ ಮೀಸಲಾತಿಗೆ ಕುಂಚಿಟಿಗರ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 17:32 IST
Last Updated 25 ಜೂನ್ 2022, 17:32 IST
ತುಮಕೂರಿನ ಗಾಜಿನ ಮನೆಯಲ್ಲಿ ಶನಿವಾರ ನಡೆದ ಕುಂಚಿಟಿಗ ಒಕ್ಕಲಿಗರ ಸಮಾವೇಶದಲ್ಲಿ ಭಾಗವಹಿಸಿದ್ದ ಜನರು
ತುಮಕೂರಿನ ಗಾಜಿನ ಮನೆಯಲ್ಲಿ ಶನಿವಾರ ನಡೆದ ಕುಂಚಿಟಿಗ ಒಕ್ಕಲಿಗರ ಸಮಾವೇಶದಲ್ಲಿ ಭಾಗವಹಿಸಿದ್ದ ಜನರು   

ತುಮಕೂರು:‘ಸಮುದಾಯವನ್ನು ಯಾವುದೇ ಹಂತದಲ್ಲಿ ಇನ್ನು ಮುಂದೆ ನಿರ್ಲಕ್ಷ್ಯಿಸಿದರೆ ಸುಮ್ಮನಿರುವುದಿಲ್ಲ’ ಎಂದು ಕುಂಚಿಟಿಗ ಒಕ್ಕಲಿಗರು ಎಚ್ಚರಿಸಿದ್ದಾರೆ. ಇಲ್ಲಿನ ಗಾಜಿನ ಮನೆಯಲ್ಲಿ ಶನಿವಾರ ಸಮಾವೇಶ ನಡೆಸಿದ ಅವರು ಶಕ್ತಿ ಪ್ರದರ್ಶಿಸಿ, ಈ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.

ತುಮಕೂರು, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಸಮುದಾಯದ ಜನರು ಹೆಚ್ಚಿದ್ದಾರೆ. ಎಲ್ಲರೂ ಒಗ್ಗೂಡಬೇಕು. ಹಿಂದಿನ ವೈಮನಸ್ಸು, ಆಗಿರುವ ವ್ಯತ್ಯಾಸಗಳು, ಕಹಿ ಘಟನೆಗಳನ್ನು ಮರೆತು ಒಟ್ಟಾಗಿ ಸಾಗಬೇಕು ಎಂದು ಸಮಾಜದ ಮುಖಂಡರು ಕೋರಿದರು.

ಒಬಿಸಿಗೆ ಸೇರಿಸಲು ಒತ್ತಾಯ: ಕುಂಚಿಟಿಗರನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ (ಒಬಿಸಿ) ಸೇರಿಸಬೇಕು ಎಂದು ಪ್ರಮುಖವಾಗಿ ಒತ್ತಾಯಿಸಲಾಯಿತು. ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆದು, ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದ್ದು, ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ADVERTISEMENT

ಒಕ್ಕಲಿಗ ಸಮುದಾಯದ ಇತರ ಪಂಗಡಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಆದರೆ ಕುಂಚಿಟಿಗರನ್ನು ಮಾತ್ರ ಕೈಬಿಟ್ಟು ತಾರತಮ್ಯ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇದರಿಂದಾಗಿ ಕೇಂದ್ರ ಸರ್ಕಾರದ ಉದ್ಯೋಗ ಹಾಗೂ ಶಿಕ್ಷಣ ಮೀಸಲಾತಿಯಿಂದ ಸಮುದಾಯ ವಂಚಿತವಾಗಿದೆ. ರಾಜ್ಯದಲ್ಲಿ ಒಬಿಸಿ ಪಟ್ಟಿಗೆ ಸೇರಿಸಿದಂತೆ ಕೇಂದ್ರದಲ್ಲೂ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು’ ಎಂದು ಬೇಡಿಕೆಯನ್ನು ಸಲ್ಲಿಸಲಾಯಿತು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ಮುಖಂಡರಾದ ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ, ಟಿ.ಬಿ.ಜಯಚಂದ್ರ ಇತರರು ಮಾತನಾಡಿದರು.

ಹಿಂದೆ ಕೇಂದ್ರದ ಒಬಿಸಿ ಪಟ್ಟಿಗೆ ಕುಂಚಿಟಿಗರ ಸೇರ್ಪಡೆಗೆ ಶಿಫಾರಸು ಮಾಡಿದ್ದು, ಆಗ ತಿರಸ್ಕರಿಸಲಾಗಿದೆ. ಈಗ ಮತ್ತೊಮ್ಮೆ ಸಲ್ಲಿಕೆಯಾಗಿರುವ ವರದಿಯನ್ನು ಪರಿಗಣಿಸಿ, ಮೀಸಲಾತಿ ನೀಡಬೇಕು ಎಂದು ಸಮಾವೇಶದಲ್ಲಿ ಮಾತನಾಡಿದ ಈ ಎಲ್ಲ ಪ್ರಮುಖರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.