ADVERTISEMENT

ಕುರುಬರ ಹೋರಾಟ ಸಮಿತಿಯಿಂದ ಕೇಂದ್ರಕ್ಕೆ ಮನವಿ

ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 21:13 IST
Last Updated 24 ನವೆಂಬರ್ 2020, 21:13 IST

ನವದೆಹಲಿ: ರಾಜ್ಯದಲ್ಲಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಕುರುಬರ ಹೋರಾಟ ಸಮಿತಿಯ ನಿಯೋಗವು ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವರಿಗೆ ಮಂಗಳವಾರ ಮನವಿ ಸಲ್ಲಿಸಿತು.

ಹಾಲು ಕುರುಬ, ಜೇನು ಕುರುಬ, ಕಾಡು ಕುರುಬ, ಗೊಂಡಾ ಮತ್ತಿತರ ಹೆಸರುಗಳಿಂದ ರಾಜ್ಯದಲ್ಲಿ ನೆಲೆ ನಿಂತಿರುವ ಕುರುಬ ಸಮುದಾಯವು ಮೂಲತಃ ಕುರಿ ಸಾಕಣೆಯನ್ನೇ ಅವಲಂಬಿಸಿಕೊಂಡು, ಬೆಟ್ಟ, ಗುಡ್ಡದಲ್ಲಿ ಅಲೆದಾಡುತ್ತ ಜೀವನ ನಡೆಸಿಕೊಂಡು ಬಂದಿದೆ. ಹಿಂದುಳಿದಿರುವ ಈ ಬುಡಕಟ್ಟು ಸಮುದಾಯದ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ನ್ಯಾಯ ಸಲ್ಲಿಸಬೇಕು ಎಂದು ಸಚಿವೆ ರೇಣುಕಾ ಸಿಂಗ್ ಸರುತಾ ಅವರನ್ನು ಕೋರಲಾಯಿತು.

ರಾಜ್ಯದ ವಿವಿಧೆಡೆ ಇರುವ ಸಮುದಾಯವನ್ನು ಸ್ವಾತಂತ್ರ್ಯಾನಂತರ ಪರಿಶಿಷ್ಟ ಪಂಗಡಕ್ಕೆ ಸೇರಿಸಿ, ಮೀಸಲಾತಿ ಮತ್ತಿತರ ವಿಶೇಷ ಸೌಲಭ್ಯ ಒದಗಿಸುವ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುರುಬರು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡಬೇಕಿತ್ತು. ಆದರೆ, ಇದುವರೆಗೂ ಆ ಕೆಲಸ ಆಗದೇ ತೀವ್ರ ಅನ್ಯಾಯ ಆಗಿದೆ. ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರಾಜ್ಯದಲ್ಲಿನ ಸಮಸ್ತ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ನ್ಯಾಯ ಸಲ್ಲಿಸಬೇಕಿದೆ. ಈ ಸಂಬಂಧ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ADVERTISEMENT

ಕುರುಬ ಸಮುದಾಯದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ನಂತರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಅವರನ್ನು ಭೇಟಿಯಾದ ನಿಯೋಗವು ಈ ಕುರಿತ ಮನವಿ ಸಲ್ಲಿಸಿತು.

ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ, ಸುಬ್ರಹ್ಮಣ್ಯ, ಡಿ.ವೆಂಕಟೇಶ ಮೂರ್ತಿ, ಕೆ.ಈ. ಕಾಂತೇಶ, ಟಿ.ಬಿ. ಬೆಳಗಾವಿ, ಪುಟ್ಟಸ್ವಾಮಿ, ಆನೇಕಲ್‌ ದೊಡ್ಡಯ್ಯ ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.