ADVERTISEMENT

ವಿಧಾನಸಭೆ ಚುನಾವಣೆ | 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ: ಕುರುಬ ಸಮುದಾಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 19:32 IST
Last Updated 8 ಮಾರ್ಚ್ 2023, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‌ ರಾಜ್ಯದಲ್ಲಿನ ಕನಿಷ್ಠ 40 ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಿದೆ.

‘ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯವಾಗಿದ್ದರೂ ಕುರುಬರಿಗೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮುದಾಯದ ಮತದಾರರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಿರ್ಣಾಯಕರಾಗಿದ್ದಾರೆ. 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯ ಇದ್ದರೂ ಹಲವು ದಶಕಗಳಿಂದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಪ್ರಾತಿನಿಧ್ಯ ನೀಡಿಲ್ಲ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶಮೂರ್ತಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2008ರಲ್ಲಿ ಸಿದ್ದರಾಮಯ್ಯ ಸೇರಿ ಒಟ್ಟು 6 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ 14 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ 12 ಮಂದಿ ಆಯ್ಕೆಯಾಗಿದ್ದರು. ಇವರಲ್ಲಿ ಕಾಂಗ್ರೆಸ್‌ನ 8 ಮಂದಿ, ಒಬ್ಬರು ಬಿಜೆಪಿ ಮತ್ತು ಇಬ್ಬರು ಜೆಡಿಎಸ್‌ನಿಂದ ಹಾಗೂ ಪಕ್ಷೇತರರಾಗಿ ಒಬ್ಬರು ಆಯ್ಕೆಯಾಗಿದ್ದರು. 2018ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಿಯಲ್ಲಿ ಕಾಂಗ್ರೆಸ್ ಪಕ್ಷದಿಂದ 20 ಮಂದಿ, ಜೆಡಿಎಸ್ ಪಕ್ಷದಿಂದ 11 ಮಂದಿ, ಬಿಜೆಪಿ ಪಕ್ಷದಿಂದ 5 ಮಂದಿಗೆ ಟಿಕೆಟ್ ನೀಡಿದ್ದು, ಅದರಲ್ಲೂ ಕುರುಬರಿಗೆ ಅನ್ಯಾಯವಾಗಿದೆ’ ಎಂದು ದೂರಿದರು. ಪ್ರಭಾರ ಅಧ್ಯಕ್ಷ ಬಿ. ಸುಬ್ರಮಣ್ಯ ಇದ್ದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.