ADVERTISEMENT

165 ಕಿ.ಮೀ. ದೂರ ಸಾಗಿದ ಕುರುಬ ಸಮುದಾಯದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 17:25 IST
Last Updated 24 ಜನವರಿ 2021, 17:25 IST
ಎಸ್‌.ಟಿ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕುರುಬ ಸಮುದಾಯದ ಹೋರಾಟದ ಪಾದಯಾತ್ರೆ ಭಾನುವಾರ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 4ರ ಮಾರ್ಗದಲ್ಲಿ ಸಾಗಿತು
ಎಸ್‌.ಟಿ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕುರುಬ ಸಮುದಾಯದ ಹೋರಾಟದ ಪಾದಯಾತ್ರೆ ಭಾನುವಾರ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 4ರ ಮಾರ್ಗದಲ್ಲಿ ಸಾಗಿತು   

ಚಿತ್ರದುರ್ಗ: ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕುರುಬ ಸಮುದಾಯದ ಹೋರಾಟದ ಪಾದಯಾತ್ರೆ ಭಾನುವಾರ ಚಿತ್ರದುರ್ಗದಿಂದ ಹೊರಟು 25 ಕಿ.ಮೀ. ಕ್ರಮಿಸಿ ಹಿರಿಯೂರು ತಾಲ್ಲೂಕಿನ ಐಮಂಗಲ ತಲುಪಿತು.

ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ಮಾರ್ಗವಾಗಿ ಮುಂಜಾನೆ 5.30ಕ್ಕೆ ಪಾದಯಾತ್ರೆ ಆರಂಭ ಆಗುತ್ತಿದ್ದಂತೆ ಕುಂಚಿಗನಾಳ್ ಗ್ರಾಮದ ಕುರುಬ ಸಮುದಾಯದವರು ನಾಲ್ಕು ಮೂಟೆ ಹೂವುಗಳನ್ನು ಸ್ವಾಮೀಜಿಗಳ ಮೇಲೆ ಪುಷ್ಪ ಮಳೆಗೈಯುವ ಮೂಲಕ ಆತ್ಮೀಯವಾಗಿ ಬೀಳ್ಕೊಟ್ಟರು.

ಹತ್ತನೇ ದಿನದ ಈ ಪಾದಯಾತ್ರೆ ಈವರೆಗೆ 165 ಕಿ.ಮೀ. ದೂರ
ಸಾಗಿದ್ದು, ಮಾರ್ಗದುದ್ದಕ್ಕೂ ಸಮುದಾಯದವರು ಅಭೂತಪೂರ್ವ ಸ್ವಾಗತ ಕೋರಿದರು. ತಾಲ್ಲೂಕಿನ ಕ್ಯಾದಿಗೆರೆ ತಲುಪುತ್ತಿದ್ದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಮುದಾಯದವರು ಅದ್ದೂರಿಯಾಗಿ ಬರಮಾಡಿಕೊಂಡರು. ಮಹಿಳೆಯರು ಶ್ರೀಗಳಿಗೆ ಕಳಶ, ಆರತಿ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದರು.

ADVERTISEMENT

ರಜೆ ದಿನವಾದ್ದರಿಂದ ಭಾನುವಾರ ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ಕೊಪ್ಪಳ, ಬೆಂಗಳೂರು ಸೇರಿ ರಾಜ್ಯದ ಇತರೆ ಭಾಗಗಳ ಸಾವಿರಾರು ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

‘ಜೈ ಕುರುಬ’, ‘ಜೈ ಕನಕ’, ‘ಜೈ ರಾಯಣ್ಣ’, ‘ಎಸ್.ಟಿ ಹೋರಾಟಕ್ಕೆ ಜಯವಾಗಲಿ’ ಎಂಬ ಘೋಷಣೆ ಮೊಳಗಿಸುತ್ತಾ ಪಾದಯಾತ್ರೆಯಲ್ಲಿ ಸಾಗಿದರು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಸಚಿವ ಎಚ್.ಎಂ. ರೇವಣ್ಣ ಸೇರಿ ಸಮುದಾಯದ ಮುಖಂಡರು
ಭಾಗವಹಿಸಿದ್ದರು.

ಎಸ್‌ಟಿ ಮೀಸಲಾತಿಗೆ ಏಪ್ರಿಲ್‌ನಲ್ಲಿ ಪಾದಯಾತ್ರೆ

ಹೊಸದುರ್ಗ: ‘ಮಾರ್ಚ್‌ ಅಂತ್ಯದೊಳಗೆ ಉಪ್ಪಾರರ ಕುಲಶಾಸ್ತ್ರೀಯ ಅಧ್ಯಯನ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ಏಪ್ರಿಲ್‌ನಲ್ಲಿ ಉಪ್ಪಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ನೀಡಬೇಕು ಎಂದು ಹಕ್ಕೊತ್ತಾಯ ಮಾಡಲು ಶ್ರೀಮಠದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಲಾಗುವುದು’ ಎಂದು ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಬ್ರಹ್ಮವಿದ್ಯಾನಗರ ಭಗೀರಥ ಗುರುಪೀಠದ ಆವರಣದಲ್ಲಿ ಭಾನುವಾರ ಮುಕ್ತಾಯಗೊಂಡ ಉಪ್ಪಾರರ ಕುಲಶಾಸ್ತ್ರೀಯ ಅಧ್ಯಯನ ಕಾರ್ಯಾಗಾರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ‘ಈಗಾಗಲೇ ಉಪ್ಪಾರರ ಕುಲಶಾಸ್ತ್ರೀಯ ಅಧ್ಯಯನದ ಮುಖ್ಯಸ್ಥ ಪ್ರೊ.ಕೆ.ಎಂ.ಮೈತ್ರಿ ಅವರು ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ. ತತ್ವರಿತವಾಗಿ ಅಧ್ಯಯನ ಮುಗಿಸಿ, ಸರ್ಕಾರಕ್ಕೆ ಸಮಗ್ರವಾದ ವರದಿ ಸಲ್ಲಿಸಲಿದ್ದಾರೆ.ನಂತರ ಬೀದರ್‌ನಿಂದ ಯಾತ್ರೆ ಕೈಗೊಂಡು ರಾಜ್ಯದಾದ್ಯಂತ ಜನಜಾಗೃತಿ ಮೂಡಿಸಲಾಗುವುದು. ಬಳಿಕ ಪಾದಯಾತ್ರೆ ಕೈಗೊಂಡು ಬೃಹತ್‌ ಸಮಾವೇಶ ನಡೆಸಲಾಗುವುದು. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಬೇಡಿಕೆಯ ಶಿಫಾರಸು ಸಲ್ಲಿಸಿದ ಬಳಿಕ ದೆಹಲಿಯಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖಂಡರ ಸಮ್ಮುಖದಲ್ಲಿ ಬೃಹತ್‌ ಹೋರಾಟ ಮಾಡಲಾಗುವುದು’ ಎಂದು ಸ್ವಾಮೀಜಿ ಹೋರಾಟದ ರೂಪುರೇಷೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.