ADVERTISEMENT

ಕುರುಬ ಸಮಾಜವನ್ನು STಗೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ: ಸಿಎಂ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 12:58 IST
Last Updated 1 ಫೆಬ್ರುವರಿ 2026, 12:58 IST
   

ರಾಯಚೂರು: ‘ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೇಂದ್ರ ಕೆಲವಷ್ಟು ಮಾಹಿತಿ ಕೇಳಿತ್ತು. ಪುನಃ ಸ್ಪಷ್ಟೀಕರಣ ಸಹಿತ ಮತ್ತೇ ಕೇಂದ್ರಕ್ಕೆ ಶಿಫಾರಸು ಮಾಡಿ ಕಳಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ದೇವದುರ್ಗ ತಾಲ್ಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಿಂಥಣಿ ಬ್ರಿಜ್ ಶಾಖಾ ಮಠದಲ್ಲಿ ಭಾನುವಾರ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಮೊದಲು ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳ ಗೊಂಡ ಕುರುಬ ಸಮುದಾಯವನ್ನು ಮಾತ್ರ ಉಲ್ಲೇಖಿಸಿ ಕಳುಹಿಸಿದ್ದೆ. ಈಗ ರಾಜ್ಯ ಎಲ್ಲ ಕುರುಬ ಸಮುದಾಯವನ್ನು ಉಲ್ಲೇಖಿಸಿ ಶಿಫಾರಸು ಮಾಡಿರುವೆ. ರಾಜ್ಯ ಸರ್ಕಾರದ ಕೈಯಲ್ಲಿದ್ದರೆ ಆಗಲೇ ಎಸ್‌ಟಿಗೆ ಸೇರಿಸಿ ಬಿಡುತ್ತಿದ್ದೆ’ ಎಂದು ತಿಳಿಸಿದರು.

ADVERTISEMENT

ಇನ್ನೊಂದು ತಿಂಗಳಲ್ಲಿ ಜಾತಿಗಣತಿ ಬಿಡುಗಡೆ:

‘ಜಾತಿ ಗಣತಿ ವರದಿ ಶಿಫಾರಸು ಮಾಡಿಕೊಟ್ಟ ಒಂದು ತಿಂಗಳಲ್ಲೇ ಬಿಡುಗಡೆ ಮಾಡಲಾಗುವುದು‘ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

‘ಸರ್ಕಾರದ ಮುಂದೆ ವರದಿ ಸಲ್ಲಿಕೆಯಾದ ನಂತರ ಚರ್ಚೆ ಮಾಡಿ ಅಂಗೀಕಾರ ಮಾಡಲಾಗುವುದು. ಜಾತಿ ಗಣತಿ ಬಿಡುಗಡೆಗೆ ಗರಿಷ್ಠ ಅಂದರೆ ಎರಡು ತಿಂಗಳಾಗಬಹುದು ಅಷ್ಟೇ‘ ಎಂದರು.

‘ನಾನು ಅಧಿಕಾರದ ಹಿಂದೆ ಬಿದ್ದವನಲ್ಲ. ಹೋರಾಟ ಮಾಡಿಕೊಂಡು ಬಂದವನು. ನನ್ನ ಶಕ್ತಿ ಇರುವ ತನಕ ರಾಜಕೀಯ ಮಾಡುತ್ತೇನೆ. ಧ್ವನಿಯಿಲ್ಲದವರಿಗೆ ಧ್ವನಿಯಾಗುವ ಕೆಲಸ ಮಾಡುತ್ತೇನೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.