ADVERTISEMENT

ಕುರುಬರ ಅಭಿವೃದ್ಧಿಗೆ ಸಿದ್ಧರಾಮಯ್ಯ ಕೊಡುಗೆ ಏನು: ಎಚ್. ವಿಶ್ವನಾಥ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 15:47 IST
Last Updated 19 ನವೆಂಬರ್ 2025, 15:47 IST
ಎಚ್. ವಿಶ್ವನಾಥ್
ಎಚ್. ವಿಶ್ವನಾಥ್   

ಬೆಂಗಳೂರು: ‘ಸಿದ್ದರಾಮಯ್ಯ ಅವರು ಕುರುಬ ಸಮಾಜದ ಅಭಿವೃದ್ಧಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಏನು ಕೊಡುಗೆ ನೀಡಿದ್ದಾರೆ. ಅದರ ಪಟ್ಟಿ ನೀಡಲು ಸಾಧ್ಯವೇ? ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ ಕುರುಬರ ಅಭಿವೃದ್ಧಿ ಮಂಡಳಿಯನ್ನು ಏಕೆ ಸ್ಥಾಪಿಸಿಲ್ಲ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಪ್ರಶ್ನಿಸಿದರು. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕುರುಬರ ಸಂಘವನ್ನು ಉಳಿಸಲು ಸಾಧ್ಯವಾಗುತ್ತಿರಲಿಲ್ಲ. ಕಾಗಿನೆಲೆ ಕನಕಗುರು ಪೀಠವೂ ಸ್ಥಾಪನೆಯಾಗುತ್ತಿರಲಿಲ್ಲ. ಇವೆಲ್ಲವನ್ನೂ ನಾನೇ ಮಾಡಿದ್ದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಲ್ಲ’ ಎಂದರು. 

‘ಪುಟ್ಟಸ್ವಾಮಿ ಎಂಬ ಪದಾಧಿಕಾರಿಯೊಬ್ಬ ಕುರುಬರ ಸಂಘವನ್ನು ₹3 ಕೋಟಿಗೆ ಅಡಮಾನವಿಟ್ಟಿದ್ದ, ಅದನ್ನು ನಾನು ಬಿಡಿಸಿದೆ ಎಂದು ಸಿದ್ದರಾಮಯ್ಯ ಅವರು ಸುಳ್ಳು ಹೇಳಿಕೆ ನೀಡಿದ್ದಾರೆ. ಆ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಹೇಳಿದರು. 

ADVERTISEMENT

‘ಸಮುದಾಯದ ಮುಖಂಡರು ಕನಕ ಗುರುಪೀಠವನ್ನು ಸ್ಥಾಪಿಸುವ ಕುರಿತು ಸಭೆಗೆ ಆಹ್ವಾನಿಸಿದಾಗ ಅದಕ್ಕೆ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದರು. ನಾನು ಸಮಾಜವಾದಿ ಹಿನ್ನೆಲೆಯಿಂದ ಬಂದವನು. ಲೋಹಿಯಾ ಚಿಂತನೆಗಳನ್ನು ಅಳವಡಿಸಿಕೊಂಡವನು, ಕುರುಬರಿಗೆ ಮಠ ಯಾಕೆ ಬೇಕು? ನಮ್ಮವರನ್ನು ಮಡಿವಂತಿಕೆಗೆ ಏಕೆ ದೂಡುತ್ತೀರಿ ಎಂದು ಹೇಳಿದ್ದವರು ನೀವೇ ಅಲ್ಲವೇ’ ಎಂದು ಪ್ರಶ್ನಿಸಿದರು. 

‘ಕುರುಬರ ಸಂಘ, ಕನಕ ಗುರುಪೀಠ ಅಥವಾ ಕುರುಬ ಸಮಾಜದ ಟ್ರಸ್ಟ್‌ನಿಂದ ಸಮುದಾಯದ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಅವಕಾಶ ನೀಡಲಿಲ್ಲ. ಮೈಸೂರಿನಲ್ಲಿ ಎಂಜಿನಿಯರಿಂಗ್‌ ಕಾಲೇಜು ನಿರ್ಮಾಣ ಹಂತದಲ್ಲಿ ಉಳಿದಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.