
ಶಿವಶಂಕರ್
ಬೆಂಗಳೂರು: ಕುಸುಮ್–ಸಿ ಯೋಜನೆಯಡಿ ರಾಜ್ಯದಲ್ಲಿ ಇನ್ನೂ 750 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಯೋಜನೆಯಡಿ ವಿದ್ಯುತ್ ಉತ್ಪಾದಿಸಲು ಮುಂದೆ ಬರುವ ಖಾಸಗಿಯವರಿಗೆ ಕೇಂದ್ರ ಸರ್ಕಾರವು ಪ್ರತಿ ಮೆಗಾವಾಟ್‌ಗೆ ₹1.05 ಕೋಟಿ ಸಹಾಯಧನ ನೀಡಲಿದೆ.
‘ಈ ಮುಂಚೆ ಕುಸುಮ್– ಸಿ ಅಡಿಯಲ್ಲಿ 3,900 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆಗೆ ಅವಕಾಶ ಇತ್ತು. ಈ ಪೈಕಿ 2,400 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆಯಲಾಗಿದೆ. 1,500 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆಯುವ ಹಂತದಲ್ಲಿ ಇದ್ದೇವೆ’ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಬೆಸ್ಕಾಂ) ಎನ್.ಶಿವಶಂಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಮೂರನೇ ಹಂತದಲ್ಲಿ 750 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸ ಲಾಗುತ್ತದೆ. ಇದರಲ್ಲಿ ಕಂಪನಿವಾರು ಹಂಚಿಕೆಯಾಗಬೇಕು. ಬೆಸ್ಕಾಂ ವ್ಯಾಪ್ತಿಯಲ್ಲಿ 300 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶ ಸಿಗಲಿದೆ. ಒಂದು ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆಗೆ ₹3.5 ಕೋಟಿಯಿಂದ ₹4 ಕೋಟಿ ವೆಚ್ಚ ವಾಗಲಿದೆ. ಕೇಂದ್ರ ಸರ್ಕಾರ ನೀಡುವ ಸಹಾಯ ಧನದ ಸದುಪಯೋಗವನ್ನು ಖಾಸಗಿಯವರು ಪಡೆಯಬಹುದು ಎಂದು ಅವರು ವಿವರಿಸಿದರು.
ಮೊದಲ ಹಂತದಲ್ಲಿ ಟೆಂಡರ್ ಆಗಿರುವ 2,400 ಮೆಗಾವಾಟ್ ವಿದ್ಯುತ್ ಉತ್ಪಾದನೆಗೂ ಸಹಾಯಧನ ಸಿಗಲಿದೆ. ಆದರೆ, ಈಗ ಟೆಂಡರ್ ಆಗುವ ಹಂತದಲ್ಲಿರುವ 1,500 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಸಹಾಯಧನ ಸಿಗುವುದಿಲ್ಲ.
ಮೊದಲ ಹಂತದ ಉತ್ಪಾದನೆ ಪ್ರಕ್ರಿಯೆಯ ಸಂಪೂರ್ಣ ಗುರಿಯನ್ನು 2026ರ ಮಾರ್ಚ್ ವೇಳೆಗೆ ತಲುಪುವ ಯೋಜನೆ ಇದೆ. ಎರಡನೇ ಹಂತದಲ್ಲಿ 1,500 ಮೆಗಾವಾಟ್ ವಿದ್ಯುತ್ ಉತ್ಪಾದನೆ ಕಾರ್ಯ ಶುರುವಾಗಲು ಹತ್ತು ತಿಂಗಳು ಬೇಕಾಗಬಹುದು. ವಿದ್ಯುತ್ ವಿತರಣೆಯ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ, ಸೌರ ವಿದ್ಯುತ್ ಉತ್ಪಾದನೆಗೆ ಸ್ಥಳಗಳನ್ನು ಗುರುತಿಸಲಾಗುತ್ತದೆ. ಅಂತಹ ಕಡೆ ಖಾಸಗಿಯವರು ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಆರಂಭಿಸಬಹುದು.
ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಸುಮಾರು ನಾಲ್ಕು ಎಕರೆ ಜಾಗ ಬೇಕಾಗುತ್ತದೆ. ಜಾಗವನ್ನು
25 ವರ್ಷಕ್ಕೆ ಗುತ್ತಿಗೆ ಪಡೆಯಬಹುದು. ಒಂದು ಎಕರೆಗೆ ವರ್ಷಕ್ಕೆ ₹25 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ಈ ದರವನ್ನು ನೀಡಿ ಖಾಸಗಿಯವರು ರೈತರಿಂದ ಜಮೀನು ಪಡೆಯ ಬಹುದು. ಒಂದು ವೇಳೆ ಸರ್ಕಾರಿ ಜಾಗ ಇದ್ದರೆ, ಇನ್ನೂ ನೀಡಲಾಗುತ್ತದೆ.
ಈ ರೀತಿ ಉತ್ಪಾದನೆ ಆಗುವ ಪ್ರತಿ ಯೂನಿಟ್ ವಿದ್ಯುತ್‌ಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಗರಿಷ್ಠ ₹3.17 ದರ ನಿಗದಿ ಮಾಡಿದೆ. ಆ ಪ್ರಕಾರ ಖರೀದಿ ಮಾಡಿ, ಆಯಾ ಫೀಡರ್‌ಗಳ ವ್ಯಾಪ್ತಿಯಲ್ಲಿ ಬರುವ ರೈತರ ಪಂಪ್‌ಸೆಟ್‌ಗಳಿಗೆ ಪೂರೈಸಲಾಗುತ್ತದೆ. ಇದರಿಂದ ರೈತರಿಗೆ ಹಗಲಿನಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗ ಲಿದೆ. ಅಲ್ಲದೆ ವಿದ್ಯುತ್ ಪರಿವರ್ತಕಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಶಿವಶಂಕರ್ ತಿಳಿಸಿದರು.
ಬೆಂಗಳೂರು ಸುತ್ತಮುತ್ತ ಖಾಸಗಿ ಜಾಗ ಸಿಗುತ್ತಿಲ್ಲ. ಹೀಗಾಗಿ ಸಣ್ಣ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್ ರಾಜ್ ಇಲಾಖೆಯ ಒಪ್ಪಿಗೆ ಪಡೆದು ಕೆರೆಗಳ ಸುತ್ತಲಿನ ಜಾಗವನ್ನು ಬಳಸಿಕೊಂಡು ಸೌರ ವಿದ್ಯುತ್ ಘಟಕಗಳನ್ನು ಆರಂಭಿಸ ಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಕೆರೆಯ ಜಾಗದಲ್ಲಿ ಈಗಾಗಲೇ ಐದು ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
300 ಮೆಗಾವಾಟ್ ಉತ್ಪಾದನೆ ಶುರು
ಕುಸುಮ್-ಸಿ ಯೋಜನೆಗೆ ಈ ವರ್ಷದ ಜೂನ್ 11ರಂದು ರಾಜ್ಯದಲ್ಲಿ ಚಾಲನೆ ನೀಡಿದ್ದು, ಈಗಾಗಲೇ ಸುಮಾರು 300 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಯಾಗುತ್ತಿದೆ. ರಾಜ್ಯದ ಐದೂ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಸೌರ ವಿದ್ಯುತ್ ಘಟಕಗಳನ್ನು ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ. ಜಾಗದ ಕೊರತೆಯಿಂದಾಗಿ ಕೆಲವೆಡೆ ನಿರೀಕ್ಷಿತ ಮಟ್ಟದಲ್ಲಿ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.