ADVERTISEMENT

ಕುವೆಂಪು ಸ್ಮಾರಕ: ಕುಟುಂಬದಿಂದ ಹೆಚ್ಚಿನ ಹಣ ಬೇಡಿಕೆ - ಸಚಿವ ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 17:34 IST
Last Updated 30 ಜನವರಿ 2026, 17:34 IST
<div class="paragraphs"><p>ಸಚಿವ ಶಿವರಾಜ ತಂಗಡಗಿ</p></div>

ಸಚಿವ ಶಿವರಾಜ ತಂಗಡಗಿ

   

ಬೆಂಗಳೂರು: ‘ಮೈಸೂರಿನಲ್ಲಿರುವ ಕುವೆಂಪು ನಿವಾಸ ‘ಉದಯ ರವಿ’ಯನ್ನು ಸ್ಮಾರಕವನ್ನಾಗಿಸಲು ಸರ್ಕಾರ ಸಿದ್ಧವಿದೆ. ಆ ನಿವಾಸವನ್ನು ನೀಡಲು ಅವರ ಕುಟುಂಬದವರು ಹೆಚ್ಚಿನ ಹಣ ಹಾಗೂ ಕೆಲವು ಬೇಡಿಕೆಗಳನ್ನಿರಿಸಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌. ತಂಗಡಗಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಪ್ರತಾಪ್‌ ಸಿಂಹ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘2018–19ನೇ ಸಾಲಿನ ಆಯವ್ಯಯದಲ್ಲಿ ‘ಉದಯ ರವಿ’ಯನ್ನು ರಾಷ್ಟ್ರಕವಿ ಸ್ಮಾರಕವಾಗಿ ರಕ್ಷಿಸಿ, ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದರು. ಮಹಾಕವಿಯ ದರ್ಶನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸ್ಮಾರಕದ ಉದ್ದೇಶ’ ಎಂದರು.

ADVERTISEMENT

‘ಈ ಘೋಷಣೆಯ ನಂತರ, ಕುವೆಂಪು ಅವರ ಮಗಳು ತಾರಿಣಿ ಚಿದಾನಂದ ಅವರು ‘ಉದಯ ರವಿ’ಯನ್ನು ಹಸ್ತಾಂತರಿಸಲು ಕೆಲವು ಬೇಡಿಕೆಗಳನ್ನಿರಿಸಿದ್ದಾರೆ. ಮೊದಲು ₹5 ಕೋಟಿ, ನಂತರ ₹10 ಕೋಟಿ, ₹15 ಕೋಟಿ ಬೇಡಿಕೆ ಇರಿಸಿದ್ದರು. ಜನವರಿ 13ರಂದು, ಉದಯ ರವಿಗೆ ಭೇಟಿ ನೀಡಿ ತಾರಿಣಿ ಚಿದಾನಂದ ಹಾಗೂ ಅಳಿಯ ಪ್ರೊ. ಕೆ. ಚಿದಾನಂದ ಗೌಡ ಅವರ ಜೊತೆ ಮಾತನಾಡಿದೆ. ಅವರು ಹಣದ ಜೊತೆಗೆ, ಮುಂದೆ ಮನೆ, ಹಿಂದೆ ನಿವೇಶನ ಸೇರಿದಂತೆ ಕೆಲವು ಬೇಡಿಕೆಗಳನ್ನು ಇರಿಸಿದ್ದಾರೆ. ಮುಖ್ಯಮಂತ್ರಿಯವರೊಂದಿಗೆ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರಿಗೆ ತಿಳಿಸಿದ್ದೇನೆ. ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಮತ್ತೊಮ್ಮೆ ಕುವೆಂಪು ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಿ ಅಂತಿಮಗೊಳಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಇನ್ನಷ್ಟು ವಿಳಂಬ ಮಾಡಬೇಡಿ, ಬೇಡಿಕೆ ಹೆಚ್ಚಾಗಬಹುದು’ ಎಂದು ಪ್ರತಾಪ್‌ ಸಿಂಹ ನಾಯಕ್ ಸಲಹೆ ನೀಡಿದರು. ‘ವಿಳಂಬ ಮಾಡಲು ನಮಗೆ ಇಷ್ಟವಿಲ್ಲ. ಆದರೆ, ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಬೇಕಿದೆ’ ಎಂದು ಶಿವರಾಜ ತಂಗಡಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.