ADVERTISEMENT

ಕುವೆಂಪು ವಿವಿ: 150ಕ್ಕೂ ಹೆಚ್ಚು ಸಿಬ್ಬಂದಿ ಬಡ್ತಿ ರದ್ದು

ಸರ್ಕಾರದ ಅನುಮತಿ ಪಡೆಯದೇ ಪದೋನ್ನತಿ, ಹೆಚ್ಚುವರಿ ವೇತನ ಕಡಿತಕ್ಕೂ ಕ್ರಮ

ಚಂದ್ರಹಾಸ ಹಿರೇಮಳಲಿ
Published 22 ಡಿಸೆಂಬರ್ 2022, 22:00 IST
Last Updated 22 ಡಿಸೆಂಬರ್ 2022, 22:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೋಧಕೇತರ ಸಿಬ್ಬಂದಿಗೆ 2012ರ ನಂತರ ನೀಡಲಾಗಿದ್ದ ಬಡ್ತಿಯನ್ನು ರದ್ದು ಮಾಡಿ ಕುವೆಂಪು ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ.

ಸರ್ಕಾರದ ಸೂಚನೆಯಂತೆ ಬಡ್ತಿ ರದ್ದತಿ ಆದೇಶ ಹೊರಡಿಸಿರುವ ಕುಲಸಚಿವೆ ಜಿ.ಅನುರಾಧಾ ಅವರು, ಬಡ್ತಿಯ ನಂತರ ಪಾವತಿಸಲಾದ ಎಲ್ಲ ಹೆಚ್ಚುವರಿ ಹಣವನ್ನು ಸಿಬ್ಬಂದಿಯ ಮಾಸಿಕ ವೇತನದಲ್ಲಿ ಕಡಿತಗೊಳಿಸುವಂತೆ ಸೂಚಿಸಿದ್ದಾರೆ.

ವಿಶ್ವವಿದ್ಯಾಲಯದ ವಿವಿಧ ವೃಂದಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಹಿರಿಯ ಸಹಾಯಕರು, ಕಿರಿಯ ಎಂಜಿನಿಯರ್‌, ಅಧೀಕ್ಷಕರು ಸೇರಿ 150ಕ್ಕೂ ಹೆಚ್ಚು ಸಿಬ್ಬಂದಿಗೆ ಬಡ್ತಿ ನೀಡಲಾಗಿತ್ತು.

ADVERTISEMENT

ಸಿಬ್ಬಂದಿಗೆ ಬಡ್ತಿ ನೀಡಲು ಸಿದ್ಧಪಡಿಸಿದ ಪಟ್ಟಿಗೆ ವಿಶ್ವವಿದ್ಯಾಲಯದ ಪ್ರಾಧಿಕಾರಗಳಾದ ಸಿಂಡಿಕೇಟ್‌, ವಿದ್ಯಾವಿಷಯಕ ಪರಿಷತ್, ಹಣಕಾಸು ಸಮಿತಿಗಳ ಅನುಮೋದನೆ ಪಡೆದು ರಾಜ್ಯಪಾಲರ ಅಂಕಿತಕ್ಕಾಗಿ ಉನ್ನತ ಶಿಕ್ಷಣ ಇಲಾಖೆಗೆ ಕಳುಹಿಸಲಾಗಿತ್ತು. ಸರ್ಕಾರ ಅನುಮೋದನೆ ನೀಡುವ ಮೊದಲೇ ಆಕ್ಷೇಪಣೆ ವ್ಯಕ್ತವಾದರೆ ಬಡ್ತಿ ಹಿಂದಕ್ಕೆ ಪಡೆಯುವ ಷರತ್ತಿಗೆ ಒಳಪಡಿಸಿ ಎಲ್ಲರಿಗೂ ಬಡ್ತಿ ನೀಡಲಾಗಿತ್ತು. ಅತ್ತ ಅನುಮೋದನೆಗೆ ಕಳುಹಿಸಿದ್ದ ಕಡತಗಳು ಪರಿಶೀಲನೆಯ ಹಂತದಲ್ಲೇಉಳಿದಿವೆ.

ರಾಜ್ಯ ಸರ್ಕಾರ ಈಚೆಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೂ ಸುತ್ತೋಲೆಯೊಂದನ್ನು ಹೊರಡಿಸಿದೆ. ನೌಕರರಿಗೆ ನೀಡುವ ಯಾವುದೇ ಬಡ್ತಿ ಮತ್ತಿತರ ಸೇವಾ ಸೌಲಭ್ಯಗಳನ್ನು ಸರ್ಕಾರದ ಅನುಮೋದನೆ ಪಡೆದ ನಂತರವೇ ನೀಡಬೇಕು.ಬಡ್ತಿ ನೀಡುವಾಗ ಮೀಸಲಾತಿ ನಿಯಮ ಪಾಲನೆಯಾಗಬೇಕು. ನಿಯಮಾನುಸಾರ ಹುದ್ದೆಗಳನ್ನು ಸೃಜನೆ ಮಾಡದೆ, ಪರಿನಿಯಮಾವಳಿಗಳನ್ನು ರಚಿಸಿಕೊಳ್ಳದೆ ನೇಮಕಾತಿ, ಬಡ್ತಿ, ಹುದ್ದೆಗಳ ಉನ್ನತೀಕರಣ ಮಾಡಬಾರದು. ಹಾಗೆ ಮಾಡಿ ಆರ್ಥಿಕ ನಷ್ಟವಾದರೆ ನಿರ್ಧಾರ ತೆಗೆದುಕೊಂಡ ಕುಲಪತಿ, ಕುಲಸಚಿವರು, ಹಣಕಾಸು ಅಧಿಕಾರಿ, ನೌಕರರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಕುವೆಂಪು ವಿಶ್ವವಿದ್ಯಾಲಯದ ಬಡ್ತಿ ಕುರಿತಂತೆ ಸರ್ಕಾರ ಮತ್ತೊಂದು ಪ್ರತ್ಯೇಕ ಸುತ್ತೋಲೆ ಹೊರಡಿಸಿದ್ದು, ವಿಶ್ವವಿದ್ಯಾಲಯದ ಸಂಪೂರ್ಣ ಆಡಳಿತ ವಿಭಾಗ, ಅಧಿಕಾರಿ, ಸಿಬ್ಬಂದಿ ಹುದ್ದೆಗಳ ವಿವರ ಕೇಳಿದೆ. ಪೂರ್ವಾನುಮತಿ ಇಲ್ಲದೇ ಹುದ್ದೆಗಳನ್ನು ಸೃಜಿಸಿದ್ದರೆ, ಉನ್ನತೀಕರಿಸಿದ್ದರೆ ತಕ್ಷಣ ರದ್ದುಗೊಳಿಸುವಂತೆ ಸೂಚಿಸಿದೆ. ಸರ್ಕಾರದ ಪೂರ್ವಾನುಮತಿ ಪಡೆಯದೇ ಬಡ್ತಿ ನೀಡಿದ್ದ ಕಾರಣ ವಿಶ್ವವಿದ್ಯಾಲಯ ಹಿಂದೆ ಹೊರಡಿಸಿದ್ದ ಬಡ್ತಿ ಆದೇಶಗಳನ್ನೇ ರದ್ದು ಮಾಡಿದೆ. ಸರ್ಕಾರದ ಅನುಮೋದನೆ ದೊರೆತ ನಂತರ ಬಡ್ತಿ, ವೇತನ ನಗದೀಕರಣ ಆದೇಶಗಳನ್ನು ಪುನರ್‌ ಪರಿಶೀಲನೆ ಮಾಡುವ ಭರವಸೆನೀಡಿದೆ.

ಹೊಂದಿಕೆಯಾಗದ ತಾಳೆ; ವೇತನಕ್ಕೆ ತಡೆ

ವಿಶ್ವವಿದ್ಯಾಲಯಕ್ಕೆ ಮಂಜೂರಾದ ಹುದ್ದೆಗಳಿಗೂ, ಬಡ್ತಿ ನೀಡಲು ಸೃಜಿಸಿದ ಹುದ್ದೆಗಳ ಸಂಖ್ಯೆಗೂ ತಾಳೆಯಾಗದೆ ಖಜಾನೆಯಲ್ಲಿ ವೇತನಗಳ ಬಿಲ್‌ ತಡೆಹಿಡಿಯಲಾಗಿದೆ.

ಅಧಿಕಾರಿಗಳು, ಸಿಬ್ಬಂದಿಯ ಹುದ್ದೆ, ವೇತನ ಶ್ರೇಣಿ ಸಹಿತ ಎಲ್ಲ ವಿವರಗಳನ್ನು ಎಚ್‌ಆರ್‌ಎಂಎಸ್‌ಗೆ ದಾಖಲಿಸಲಾಗಿದೆ. ಸರ್ಕಾರದ ಅನುಮತಿ ಪಡೆಯದೇ ಬಡ್ತಿ ನೀಡಿರುವ ಕಾರಣ ವ್ಯತ್ಯಾಸ ಸರಿಪಡಿಸಲು ಸಾಧ್ಯವಾಗಿಲ್ಲ. ಹಾಗೆ ಸಲ್ಲಿಸಲು ಬಡ್ತಿ ರದ್ದತಿ ನಿರ್ಧಾರ ಅನಿವಾರ್ಯವಾಗಿತ್ತು ಎನ್ನುತ್ತವೆ ವಿಶ್ವವಿದ್ಯಾಲಯದ ಮೂಲಗಳು.

***
ಸರ್ಕಾರದ ಅನುಮೋದನೆ ದೊರೆಯದೆ ಬಡ್ತಿ ಆದೇಶ ರದ್ದು ಮಾಡಲಾಗಿದೆ. ಅನುಮೋದನೆಯ ನಂತರ ಪುನರ್‌ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಜಿ.ಅನುರಾಧಾ,

-ಕುಲಸಚಿವೆ, ಕುವೆಂಪು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.