ADVERTISEMENT

357 ಕೆರೆಗಳ ಸಮೀಕ್ಷೆಗೆ ಚಾಲನೆ

ಕೆರೆಗಳ ಮಾಹಿತಿ ಕ್ರೋಡೀಕರಣ ಸಪ್ತಾಹ ಆರಂಭ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 21:24 IST
Last Updated 16 ಜೂನ್ 2020, 21:24 IST
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ ಸಪ್ತಾಹ ಉದ್ಘಾಟಿಸಿದರು. ಉಪ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಮೂರ್ತಿ ಇದ್ದಾರೆ
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ ಸಪ್ತಾಹ ಉದ್ಘಾಟಿಸಿದರು. ಉಪ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಮೂರ್ತಿ ಇದ್ದಾರೆ   

ಕೆಂಗೇರಿ: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಮಾಹಿತಿ ಕ್ರೋಡೀಕರಣ ಸಪ್ತಾಹ ಆರಂಭಗೊಂಡಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಮೇರೆಗೆ ಜೂನ್ 15ರಿಂದ ಆರಂಭವಾಗಿರುವ ಸಪ್ತಾಹ ಇದೇ 22ರವರೆಗೆ ಮುಂದುವರಿಯಲಿದೆ. ಕೆರೆಗಳ ಸಮಗ್ರ ಮಾಹಿತಿಯನ್ನು ಕೆ-ಜಿಐಸ್ ತಂತ್ರಾಂಶದಲ್ಲಿ ನಮೂದಿಸಲು ನ್ಯಾಯಮಂಡಳಿ ಸೂಚನೆ ನೀಡಿತ್ತು.

16 ಹೋಬಳಿ ವ್ಯಾಪ್ತಿಯ ಸುಮಾರು 357 ಕೆರೆಗಳು ಸಮೀಕ್ಷೆಗೆ ಒಳಪಡಲಿದೆ. ಕೆರೆಗಳ ನೀರಿನ ಮೂಲ, ಕೆರೆಗಳ ನೀರಿನ ಮಟ್ಟ, ಜಲಚರಗಳು, ಮೀನುಗಾರಿಕೆ ವಿವರ, ಕೆರೆ ಆಶ್ರಿತ ಕೃಷಿ ಭೂಮಿ, ಕೆರೆ ಬದಿಯ ಮಣ್ಣಿನ ಗುಣ ಲಕ್ಷಣಗಳು, ಹೂಳು, ಒತ್ತುವರಿ ವಿವರ ಹಾಗೂ ಒತ್ತುವರಿದಾರರ ಸಮಗ್ರ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಲಾಗುವುದು. ಸ್ಥಳ ಪರಿವೀಕ್ಷಣೆ, ಸ್ಥಳೀಯರ ಮಾಹಿತಿ ಹಾಗೂ ಮೂಲ ದಾಖಲೆಗಳ ಆಧಾರದಲ್ಲಿ ಮಾಹಿತಿ ಕ್ರೋಡೀಕರಣ ಕಾರ್ಯ ನಡೆಯಲಿದೆ.

ADVERTISEMENT

ಜಿಲ್ಲಾ ಪಂಚಾಯಿತಿ ಎಂಜಿನಿಯರ್, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಪ್ತಾಹ ವಿವಿಧ ಹಂತಗಳಲ್ಲಿ ರಾಜ್ಯ ವ್ಯಾಪಿ ನಡೆಯಲಿದೆ.

ಸಪ್ತಾಹಕ್ಕೆ ಚಾಲನೆ ನೀಡಿದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ, ‘ತ್ಯಾಜ್ಯ ನಿರ್ವಹಣೆ ಹಾಗೂ ಒಳಚರಂಡಿ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ನಗರದ ಏಕೈಕ ನದಿ ವೃಷಭಾವತಿಯು ಜನರ ನಿರ್ಲಕ್ಷ್ಯದಿಂದ ಸಂಪೂರ್ಣ ಮಲಿನವಾಗಿದೆ. ಕೆರೆಗಳಿಗೂ ಇದೇ ಗತಿ ಬಂದೊದಗಿದರೆ ಅಂತರ್ಜಲದ ಗುಣಮಟ್ಟ ಕೆಟ್ಟು ಮತ್ತಷ್ಟು ವಿಕೋಪಗಳನ್ನು ಎದುರಿಸಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.