ADVERTISEMENT

₹ 2.5 ಲಕ್ಷ ಮೌಲ್ಯದ ಬಿಟ್‌ಕಾಯಿನ್‌ ವಶದಲ್ಲಿ: ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 20:46 IST
Last Updated 18 ನವೆಂಬರ್ 2021, 20:46 IST
   

ಬೆಂಗಳೂರು: ‘ಹ್ಯಾಕರ್‌ ಶ್ರೀಕೃಷ್ಣ ಭಾಗಿಯಾಗಿದ್ದ ಪ್ರಕರಣದಲ್ಲಿ ಆತನ ನಿಕಟವರ್ತಿ ರಾಬಿನ್‌ ಖಂಡೇಲ್‌ವಾಲಾ ಎಂಬಾತನಿಂದ ವಶಕ್ಕೆ ಪಡೆದಿದ್ದ ₹2.5 ಲಕ್ಷ ಮೌಲ್ಯದ (ಜಪ್ತಿ ಮಾಡಿದಾಗಿನ ಮೌಲ್ಯ) 0.08 ಬಿಟ್‌ಕಾಯಿನ್‌ ಹಾಗೂ ಮೂರು ಕ್ರಿಪ್ಟೋ ಕರೆನ್ಸಿಗಳು ಪೊಲೀಸ್‌ ವ್ಯಾಲೆಟ್‌ನಲ್ಲಿ ಸುರಕ್ಷಿತವಾಗಿವೆ’ ಎಂದು ಬೆಂಗಳೂರು ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ತಿಳಿಸಿದ್ದಾರೆ.

ಪೊಲೀಸ್‌ ವ್ಯಾಲೆಟ್‌ನಲ್ಲಿದ್ದ ಬಿಟ್‌ಕಾಯಿನ್‌ಗಳು ಕಣ್ಮರೆಯಾಗಿವೆ ಎಂಬ ಆರೋಪಗಳ ಕುರಿತು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಜೊತೆ ವ್ಯವಹರಿಸುತ್ತಿದ್ದರಾಬಿನ್‌ ಖಂಡೇಲ್‌ವಾಲಾ ಖಾತೆಯಿಂದ ಜಪ್ತಿ ಮಾಡಲಾಗಿದ್ದ ಬಿಟ್‌ಕಾಯಿನ್‌ಗಳು ನಾಪತ್ತೆಯಾಗಿವೆ ಎಂಬ ಆರೋಪದಲ್ಲಿ ಹುರುಳಿಲ್ಲ. ಅವುಗಳಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ’ ಎಂದು ಹೇಳಿದ್ದಾರೆ.

‘ಪಂಚರ ಸಮಕ್ಷಮದಲ್ಲಿ 0.08 ಬಿಟ್‌ಕಾಯಿನ್‌ ಮತ್ತು ಮೂರು ಕ್ರಿಪ್ಟೋಕರೆನ್ಸಿಗಳನ್ನು ಪೊಲೀಸ್‌ ವ್ಯಾಲೆಟ್‌ಗೆ ವರ್ಗಾಯಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯಕ್ಕೂ ಮಾಹಿತಿ ನೀಡಲಾಗಿತ್ತು. ಈ ಕುರಿತು ಪ್ರಕರಣದ ಆರೋಪಪಟ್ಟಿಯಲ್ಲೂ ಉಲ್ಲೇಖಿಸಲಾಗಿತ್ತು’ ಎಂದಿದ್ದಾರೆ.‌

ADVERTISEMENT

‘ಯುನೊಕಾಯಿನ್‌ ಕಂಪನಿಗೆ ಸಂಬಂಧಿಸಿದಂತೆಯೂ ಆರೋಪ ಮಾಡಲಾಗಿತ್ತು. ಯುನೊಕಾಯಿನ್‌ ಭಾರತದಲ್ಲಿ ನಿಯಮಾನುಸಾರವಾಗಿ ಅನುಮತಿ ಪಡೆದು ಕ್ರಿಪ್ಟೋ ಕರೆನ್ಸಿಯ ವಹಿವಾಟು ನಡೆಸುತ್ತಿರುವ ಕಂಪನಿಯಾಗಿದೆ. ಕಂಪನಿಯಖಾತೆಯನ್ನು ಹ್ಯಾಕ್‌ ಮಾಡಿ, ಸಣ್ಣ ಮೊತ್ತದ ಹಣ ಕೊಳ್ಳೆ ಹೊಡೆಯಲಾಗಿತ್ತು. ಕಂಪನಿಯು ಈ ಪ್ರಕರಣದ ಆರೋಪಿಯಲ್ಲ, ಸಂತ್ರಸ್ತ. ಯುನೊಕಾಯಿನ್‌ ಕಂಪನಿಯ ವಿಚಾರದಲ್ಲಿ ಯಾವುದೇ ಬಗೆಯ ಹಿತಾಸಕ್ತಿ ಸಂಘರ್ಷವೂ ಇಲ್ಲ’ ಎಂದು ಅವರು ಹೇಳಿದ್ದಾರೆ.

ಇನ್ನೂ ಪತ್ತೆಯಾಗದ ಶ್ರೀಕಿ!

ಬಿಟ್‌ಕಾಯಿನ್‌ ಹಗರದ ಸೂತ್ರಧಾರ ಎನ್ನಲಾಗಿರುವ ಶ್ರೀಕಿ ಎಲ್ಲಿದ್ದಾನೆ ಎಂಬುದು ಇನ್ನೂ ಗೊತ್ತಾಗಿಲ್ಲ.

‘ಶ್ರೀಕಿ ಇನ್ನೂ ಪತ್ತೆಯಾಗಿಲ್ಲ. ಆತನ ಜೀವಕ್ಕೆ ಅಪಾಯವಿರುವುದಾಗಿ ಹೇಳಲಾಗಿತ್ತು. ಹೀಗಾಗಿ ಭದ್ರತೆಗೆಂದು ಮಂಗಳವಾರವೇ ಪೊಲೀಸ್‌ ಇನ್‌ಸ್ಪೆಕ್ಟರ್‌ವೊಬ್ಬರನ್ನು ನೇಮಿಸಲಾಗಿತ್ತು. ಅವರು ಸತತ ಎರಡು ದಿನ ಶ್ರೀಕಿ ಮನೆಗೆ ಹೋದರೂ ಆತ ಸಿಕ್ಕಿಲ್ಲ. ಆತನ ಮನೆಯವರಿಗೆ ನೀಡಿರುವ ಭದ್ರತೆ ಮುಂದುವರಿಸಲಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.