ADVERTISEMENT

ಸಮಗ್ರ ಭೂಸ್ವಾಧೀನ ನೀತಿ ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 15:40 IST
Last Updated 23 ಸೆಪ್ಟೆಂಬರ್ 2025, 15:40 IST
   

ಬೆಂಗಳೂರು: ‘ಕರ್ನಾಟಕದ ಸಮತೋಲಿತ ಅಭಿವೃದ್ಧಿಗೆ ಸಮಗ್ರ ಭೂಸ್ವಾಧೀನ ನೀತಿಯನ್ನು ಶೀಘ್ರವೇ ರೂಪಿಸಬೇಕು’ ಎಂದು ಒತ್ತಾಯಿಸಿ ‘ದಿ ವೇ ಫಾರ್ವರ್ಡ್‌’ ವೇದಿಕೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿ ಪತ್ರ ಬರೆದಿದೆ.

‘ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯು ಸಮಯ ನೀಡಬೇಕು’ ಎಂದು ಕೋರಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ನಾರಾಯಣಗೌಡ, ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ ಅವರು ಪತ್ರ ಬರೆದಿದ್ದಾರೆ.

‘ರಾಜ್ಯದಲ್ಲಿ ಕೃಷಿ ಭೂಮಿಯನ್ನು ವಿವಿಧ ಉದ್ದೇಶಕ್ಕೆ ಸ್ವಾಧೀನಕ್ಕೆ ತೆಗೆದುಕೊಳ್ಳುವುದು ಮತ್ತು ಅದರ ವಿರುದ್ಧ ಹೋರಾಟ ನಡೆಯುವುದು ನಡೆಯುತ್ತಲೇ ಇದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತಡೆಯಾಗಿದ್ದರೆ, ಕೈಗಾರಿಕೆಗಳ ಅಭಿವೃದ್ಧಿಗೂ ತೊಡಕಾಗಿದೆ. ಇಂತಹ ಸಮಸ್ಯೆಗಳು ಎದುರಾಗದ ರೀತಿಯಲ್ಲಿ ಏನೆಲ್ಲಾ ಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಈಚೆಗೆ ಒಂದು ದಿನದ ಚರ್ಚೆ ನಡೆಸಲಾಗಿದೆ’ ಎಂದು ವೇದಿಕೆಯು ಪತ್ರದಲ್ಲಿ ತಿಳಿಸಿದೆ.

ADVERTISEMENT

‘ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಈ ರೈತ ಸಂಘಟನೆಗಳ ಮುಖಂಡರು, ಉದ್ಯಮ ಸಂಘಟನೆಗಳ ಪ್ರತಿನಿಧಿಗಳು, ಕೃಷಿ ತಂತ್ರಜ್ಞರು ಭಾಗಿಯಾಗಿದ್ದರು. ಭೂಸ್ವಾಧೀನಕ್ಕೆ ತೆಗೆದುಕೊಂಡ ಜಮೀನುಗಳು ಅನ್ಯ ಉದ್ದೇಶಕ್ಕೆ ಬಳಕೆಯಾಗಿದ್ದರಿಂದಲೇ, ಈ ಪ್ರಕ್ರಿಯೆ ಮೇಲೆ ರೈತ ಸಮುದಾಯಕ್ಕೆ ನಂಬಿಕೆ ಹೋಗಿದೆ ಎಂಬ ಅಭಿಪ್ರಾಯ ಚರ್ಚೆಯಲ್ಲಿ ವ್ಯಕ್ತವಾಗಿದೆ’ ಎಂದು ವಿವರಿಸಿದ್ದಾರೆ.

‘ಈ ಕಾರಣದಿಂದ, ರಾಜ್ಯದಲ್ಲಿ ಈವರೆಗೆ ಸ್ವಾಧೀನಕ್ಕೆ ತೆಗೆದುಕೊಳ್ಳಲಾದ ಜಮೀನುಗಳು ಮತ್ತು ಅವುಗಳ ಬಳಕೆಗೆ ಸಂಬಂಧಿಸಿದ ಶ್ವೇತಪತ್ರವನ್ನು ಹೊರಡಿಸಬೇಕು. ಅಲ್ಲಿಯವರೆಗೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಸಬಾರದು. ಭೂಸುಧಾರಣಾ ಕಾಯ್ದೆಗೆ ಹಿಂದಿನ ಸರ್ಕಾರ ತಂದಿದ್ದ ತಿದ್ದುಪಡಿಗಳನ್ನು ವಾಪಸ್‌ ಪಡೆಯಬೇಕು. ಕೈಗಾರಿಕೆಗಳಿಗೆ ಬಂಜರು ಭೂಮಿ ನೀಡಬೇಕು ಹಾಗೂ ವಸತಿರಹಿತರಿಗೆ ಭೂಮಿ ಒದಗಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.