ಬೆಂಗಳೂರು: ‘ಭೂಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸಿದ್ದರಿಂದಾಗಿ ಕಾನೂನು ತೊಡಕುಗಳಿದ್ದು, ತಜ್ಞರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲು 10 ದಿನ ಸಮಯ ಕೇಳಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾವು ಬೆಳೆದಿದ್ದ ತರಕಾರಿ, ಹಣ್ಣು, ಹೂವಿನೊಂದಿಗೆ ಬಂದಿದ್ದ ರೈತರು ಹಾಗೂ ಸಂಘಟನೆಗಳ ಪ್ರಮುಖರ ಜತೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಿದ ಸಿದ್ದರಾಮಯ್ಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗಾರಿಕಾ ವಲಯ ಅಭಿವೃದ್ಧಿಗಾಗಿ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಸುಮಾರು 13 ಹಳ್ಳಿಗಳ ವ್ಯಾಪ್ತಿಯ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು 2022ರಲ್ಲಿಯೇ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಸ್ವಾಧೀನದಿಂದ ಕೈಬಿಡಬೇಕಾದರೆ ಒಂದಷ್ಟು ಕಾನೂನು ತೊಡಕುಗಳಿವೆ. ಕಾನೂನು ಅಭಿಪ್ರಾಯ, ಕೋರ್ಟ್ ತೀರ್ಪುಗಳನ್ನು ಪರಿಶೀಲಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಜುಲೈ 15ರಂದು ರೈತರ ಜತೆಗೆ ಮತ್ತೊಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.
ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕಿಗೆ 13 ಗ್ರಾಮಗಳ 1,777 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 2021ರಲ್ಲಿ ಪ್ರಾಥಮಿಕ ಅಧಿಸೂಚನೆ, 2022ರಲ್ಲಿ ಆದೇಶ ಹೊರಡಿಸಲಾಗಿತ್ತು. ಭೂಸ್ವಾಧೀನ ವಿರೋಧಿಸಿ ಅಂದಿನಿಂದಲೂ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿಗಳಲ್ಲಿನ ನೀರಾವರಿ, ಕೃಷಿ ಮತ್ತು ಜನವಸತಿಗಳನ್ನು ಪರಿಗಣಿಸಿ, 231.23 ಎಕರೆ, 185.18 ಎಕರೆ ಮತ್ತು 78.21 ಎಕರೆ ಸೇರಿ 495 ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಜೂನ್ 24ರಂದು ಘೋಷಿಸಿದ್ದರು. ಆದರೆ, ರೈತರು ಸರ್ಕಾರದ ನಿರ್ಧಾರವನ್ನು ಒಪ್ಪದೇ 13 ಗ್ರಾಮಗಳ ವ್ಯಾಪ್ತಿಯ ಎಲ್ಲ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ–ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರೈತರು ಹೋರಾಟ ಮುಂದುವರಿಸಿದ್ದರು.
ಏತನ್ಮಧ್ಯೆ, ರೈತ ಪ್ರತಿನಿಧಿಗಳನ್ನು ಕರೆಯಿಸಿಕೊಂಡು ಮಾತುಕತೆಯಾಡಿದ್ದ ಸಿದ್ದರಾಮಯ್ಯ ಅವರು, ಜು.5ರಂದು ಸಭೆ ನಿಗದಿ ಮಾಡಿದ್ದರು. ಗುರುವಾರ (ಜು.4) ಸಚಿವರು ಹಾಗೂ ಅಧಿಕಾರಿಗಳ ಜತೆ ಸಮಾಲೋಚನೆಯನ್ನೂ ನಡೆಸಿದ್ದರು.
ಶುಕ್ರವಾರ ನಡೆದ ಸಭೆಯಲ್ಲಿ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಸಿದ್ದನಗೌಡ ಪಾಟೀಲ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಬಿ.ಆರ್. ಪಾಟೀಲ ಉಪಸ್ಥಿತರಿದ್ದರು.
ಕಾನೂನಿಗೆ ವಿರುದ್ಧವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಸಂವಾದದಲ್ಲಿ ನಂಬಿಕೆ ಇಟ್ಟಿದ್ದೇನೆ. ನಾನೂ ರೈತ ಸಂಘದಲ್ಲಿದ್ದವನು. ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡುವುದಿಲ್ಲಸಿದ್ದರಾಮಯ್ಯ ಮುಖ್ಯಮಂತ್ರಿ
ಜುಲೈ 15ರಂದು ಮತ್ತೆ ಸಭೆ ನಿಗದಿ ಮಾಡಿದೆ. ಅವರು ಏನೇ ನಿರ್ಧಾರ ತೆಗೆದುಕೊಳ್ಳಲಿ. ರೈತರ ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲಪ್ರಕಾಶ್ ರಾಜ್ ನಟ
ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೂ ಸಂಯುಕ್ತ ಹೋರಾಟ–ಕರ್ನಾಟಕದ ನೇತೃತ್ವದಲ್ಲಿ ರೈತರ ಹೋರಾಟ ಮುಂದುವರಿಯಲಿದೆಎಚ್.ಆರ್. ಬಸವರಾಜಪ್ಪ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ಭೂಸ್ವಾಧೀನ ಅಧಿಸೂಚನೆ ಹಿಂಪಡೆಯಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಲು ಸರ್ಕಾರ 10 ದಿನಗಳ ಸಮಯ ಕೇಳಿದೆ. ಅಧಿಸೂಚನೆ ರದ್ದುಪಡಿಸುವ ನಂಬಿಕೆ ಇದೆಬಡಗಲಪುರ ನಾಗೇಂದ್ರ ಸಂಯುಕ್ತ ಹೋರಾಟ–ಕರ್ನಾಟಕದ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.