ADVERTISEMENT

ಭೂ ಖರೀದಿ ಮಿತಿ ಇಳಿಕೆ: ವಿಧಾನಸಭೆ ಒಪ್ಪಿಗೆ

ಭೂ ಸುಧಾರಣೆ ಮಸೂದೆ--– 2020ಕ್ಕೆ ವಿಧಾನಸಭೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 19:36 IST
Last Updated 26 ಸೆಪ್ಟೆಂಬರ್ 2020, 19:36 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕಾಂಗ್ರೆಸ್‌ ಸದಸ್ಯರ ವಿರೋಧದ ನಡುವೆಯೂ ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ ಮಸೂದೆ– 2020ಕ್ಕೆ ಕೆಲ ತಿದ್ದುಪಡಿಗಳೊಂದಿಗೆ ವಿಧಾನಸಭೆ ಶನಿವಾರ ಅಂಗೀಕಾರ ನೀಡಿದೆ.

ಚರ್ಚೆಯ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸರ್ಕಾರ ತಂದಿರುವ ತಿದ್ದುಪಡಿಯುರೈತರಿಗೆ ಮರಣಶಾಸನವಾಗಲಿದೆ’ ಎಂದು ಪ್ರತಿಪಾದಿಸಿದರು. ಕಾಂಗ್ರೆಸ್ ಸದಸ್ಯರು ಮಸೂದೆಯ ಪ್ರತಿಗಳನ್ನು ಹರಿದು ಎಸೆದು ಘೋಷಣೆ ಕೂಗಿದರು. ಕಾಂಗ್ರೆಸ್‌ ಹಾಗೂ ಸಚಿವ ಸಿ.ಟಿ.ರವಿ ನಡುವೆ ವಾಕ್ಸಮರವೂ ನಡೆಯಿತು.

ಮಸೂದೆಯ ಕೆಲವು ಲೋಪಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಸೆಕ್ಷನ್‌ 79ಎ ಹಾಗೂ 79ಬಿ ಗಳನ್ನು ಕೈಬಿಟ್ಟಿರುವುದನ್ನು ಸಮರ್ಥಿಸಿಕೊಂಡರು. ಮಸೂದೆಗೆ ಅಂಗೀಕಾರ ವಿರೋಧಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ನಡೆಸಿದರು. ಕಾಂಗ್ರೆಸ್‌ ಸದಸ್ಯರ ಧೋರಣೆಗೆ ಕಂದಾಯ ಸಚಿವ ಆರ್.ಅಶೋಕ ಟೀಕಾಪ್ರಹಾರ ನಡೆಸಿದರು.

ADVERTISEMENT

ತಿದ್ದುಪಡಿಗೆ ತಿದ್ದುಪಡಿ: ಕಾಯ್ದೆಯ 63ನೇ ಪ್ರಕರಣಕ್ಕೆ ತಿದ್ದುಪಡಿ ತಂದು ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೆ ಜಮೀನಿನ ಗರಿಷ್ಠ ಮಿತಿಯನ್ನು 10 ಯುನಿಟ್‌ನಿಂದ (54 ಎಕರೆ) 20 ಯುನಿಟ್‌ಗೆ (108 ಎಕರೆ) ಹೆಚ್ಚಿಸಲು ಮತ್ತು 5ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ ಭೂಮಿಯ ಮಿತಿಯನ್ನು 20 ಯುನಿಟ್‌ನಿಂದ 40 ಯುನಿಟ್‌ಗೆ (216 ಎಕರೆ) ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ವಿವಿಧ ಸಂಘಟನೆಗಳ ಹಾಗೂ ವಿರೋಧ ಪಕ್ಷಗಳ ಆಕ್ಷೇಪಕ್ಕೆ ಮಣಿದು ಅದನ್ನು ಈ ಹಿಂದಿನಂತೆ 10 ಯುನಿಟ್‌ (54 ಎಕರೆ) ಹಾಗೂ 20 ಯುನಿಟ್‌ಗೆ (108 ಎಕರೆಗೆ) ಇಳಿಸಲಾಗಿದೆ. ತಿದ್ದುಪಡಿಯ ಪ್ರಕಾರ, ಐದು ಸದಸ್ಯರಿಗಿಂತ ಹೆಚ್ಚಿನ ಜನರಿರುವ ಪ್ರತೀ ಕುಟುಂಬವು 108 ಎಕರೆಯಷ್ಟು ನೀರಾವರಿಯೇತರ ಕೃಷಿಭೂಮಿಯನ್ನು ಖರೀದಿಸಲು ಅವಕಾಶವಾಗಲಿದೆ.

ತಿದ್ದುಪಡಿ ಹಿಂದೆ ಕೋಟ್ಯಂತರ ಅವ್ಯವಹಾರ
*52 ಸಾವಿರ ಎಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಸಹಕಾರ ಸಂಘಗಳ ಗೃಹ ನಿರ್ಮಾಣ ಸಂಘಗಳ ವಿರುದ್ಧ 79ಎ, ಬಿ ಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾರ್ಪೊರೇಟ್‌ ಸಂಸ್ಥೆಗಳಿಗೆ, ಗೃಹ ನಿರ್ಮಾಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರಲ್ಲಿ ಕೋಟ್ಯಂತರ ರೂಪಾಯಿಯ ಅವ್ಯವಹಾರ ನಡೆದಿದೆ.

*ಗೇಣಿದಾರರಿಗೆ ಅನುಕೂಲ ಕಲ್ಪಿಸಲು ದೇವರಾಜ ಅರಸು ತಂದಿದ್ದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದ ಬಿಜೆಪಿ ಸರ್ಕಾರ ಕಾಯ್ದೆಯ ಆತ್ಮವನ್ನೇ ಕಿತ್ತು ಹಾಕಿದೆ.

*ಲಂಚಕ್ಕಾಗಿ ಸೆಕ್ಷನ್ 79 ಎ ಹಾಗೂ 79 ಬಿ ಅಡಿಯಲ್ಲಿ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಹಾಗಿದ್ದರೆ ಪೊಲೀಸ್‌, ಸಬ್‌ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಂಚ ತೆಗೆದುಕೊಳ್ಳುವುದಿಲ್ಲವೇ?

*ದೇಶದ ಶೇ 60ರಷ್ಟು ಸಂಪತ್ತು ಶೇ 1 ಜನರಲ್ಲಿ, ಶೇ 20ರಷ್ಟು ಸಂಪತ್ತು ಶೇ 9 ಜನರಲ್ಲಿ ಹಾಗೂ ಶೇ 1ರಷ್ಟು ಸಂಪತ್ತು ಶೇ 90 ಜನರ ಕೈಯಲ್ಲಿದೆ. ಇದರಲ್ಲಿ ಶೇ 80 ಮಂದಿ ಸಣ್ಣ ಹಿಡುವಳಿದಾರರು. ಅವರನ್ನು ಭೂರಹಿತರನ್ನಾಗಿ ಮಾಡಲು ಸರ್ಕಾರ ಹೊರಟಿದೆ.

–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

**
ತರಾತುರಿಯಲ್ಲಿ ಮಸೂದೆ ಅಗತ್ಯವಿತ್ತೇ?

*ಕೋವಿಡ್‌ ಸಂಕಷ್ಟದ ಸಮಯದಲ್ಲಿ ತರಾತುರಿಯಲ್ಲಿ ಈ ಮಸೂದೆ ತರುವ ಅಗತ್ಯ ಏನಿತ್ತು.

*79 ಎ ಹಾಗೂ ಬಿ ಯಲ್ಲಿ ಕೆಲವು ನ್ಯೂನತೆಗಳು ಇವೆ. ಇದರಿಂದ ನನಗೂ ಕೆಟ್ಟ ಅನುಭವ ಆಗಿದೆ. ಬಿಡದಿಯ ಕೇತಗಾನಹಳ್ಳಿಯ ನನ್ನ ಸ್ವಂತ ಜಮೀನಿಗೆ ಪ್ರಕರಣಗಳನ್ನು ದಾಖಲಿಸಿದರು. ರಾಜಕೀಯ ವಿರೋಧಿಗಳ ಷಡ್ಯಂತ್ರದಿಂದ 30 ವರ್ಷಗಳು ಕಳೆದರೂ ಪ್ರಕರಣ ಇತ್ಯರ್ಥ ಆಗಿಲ್ಲ.

–ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

**
ತಿದ್ದುಪಡಿ ಕಾಂಗ್ರೆಸ್‌ ಕೂಸು

* ಸೆಕ್ಷನ್‌ 79 ಎ, ಬಿ ಯನ್ನು ಕೈಬಿಡುವ ಬಗ್ಗೆ ಸಚಿವ ಸಂಪುಟದ ಉಪಸಮಿತಿ 2015ರಲ್ಲೇ ಶಿಫಾರಸು ಮಾಡಿತ್ತು. ಈ ಕಾಯ್ದೆ ಕಾಂಗ್ರೆಸ್‌ ಕೂಸು. ನಾವೇನೂ ಹೊಸದಾಗಿ ತಂದಿಲ್ಲ.

* ಸೆಕ್ಷನ್‌ 79 ಎ, ಬಿ,ಯನ್ನು ಕೈಬಿಡುವುದು ಸೂಕ್ತ ಎಂದು ಡಿ.ಕೆ.ಶಿವಕುಮಾರ್ ಅವರೇ ಸದನದಲ್ಲಿ ಹೇಳಿದ್ದರು. ಭೂ ಖರೀದಿ ಮಿತಿಗೆ ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಅರ್‌.ವಿ.ದೇಶಪಾಂಡೆ ಪ್ರತಿ‍ಪಾದಿಸಿದ್ದರು. ದ್ವಂದ್ವ ಧೋರಣೆ ಪ್ರದರ್ಶಿಸುತ್ತಿರುವ ಕಾಂಗ್ರೆಸ್‌ ನಾಯಕರಿಗೆ ನಾಚಿಕೆಯಾಗಬೇಕು.

–ಆರ್.ಅಶೋಕ, ಕಂದಾಯ ಸಚಿವ

*
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ, ಸಣ್ಣ ಹಿಡುವಳಿದಾರರ ಒಂದು ಎಕರೆ ಜಾಗ ಅನ್ಯರ ಪಾಲಾಗದಂತೆ ಎಚ್ಚರ ವಹಿಸುತ್ತೇವೆ.
–ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

*
ಬೆಂಗಳೂರಿನ ಪ್ರಭಾವಿಗಳ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಲು ತಂದಿರುವ ಮಸೂದೆ ಇದು. ಇದನ್ನು ಬೆಂಗಳೂರಿನ ಸುತ್ತಮುತ್ತಲಿನ 25 ಕಿ.ಮೀ.ಗೆ ಸೀಮಿತ ಮಾಡಿ.
–ಕೆ.ಎಂ.ಶಿವಲಿಂಗೇಗೌಡ, ಜೆಡಿಎಸ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.