ADVERTISEMENT

‘ಅಕ್ರಮ ಸಕ್ರಮ: ಮತ್ತೆ ಅವಕಾಶಕ್ಕೆ ಸಿ.ಎಂ ಜೊತೆ ಚರ್ಚೆ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 20:28 IST
Last Updated 17 ಮಾರ್ಚ್ 2021, 20:28 IST

ಬೆಂಗಳೂರು: ‘ಅಕ್ರಮ ಸಕ್ರಮಕ್ಕೆ ನಮೂನೆ 57ರ ಅಡಿ ಅರ್ಜಿ ಸಲ್ಲಿಸಲು ಇನ್ನೂ ಎಂಟು ದಿನ ಇದ್ದಾಗಲೇ ಲೋಕಸಭೆ ಚುನಾವಣೆ ಘೋಷಣೆ (2019) ಘೋಷಣೆ ಆಗಿದ್ದರಿಂದ ಅರ್ಜಿ ಸಲ್ಲಿಸಲು ಸಾಧ್ಯ ಆಗದವರಿಗೆ ಅವಕಾಶ ಕಲ್ಪಿಸಲು ಕಾಯ್ದೆ ತಿದ್ದುಪಡಿಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ, ತೀರ್ಮಾನಿಸಲಾಗುವುದು’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದ ಕಾಂಗ್ರೆಸ್ಸಿನ ಪ್ರತಾಪ್‌ಚಂದ್ರ ಶೆಟ್ಟಿ, ‘ಕಾಯ್ದೆ ಪ್ರಕಾರ ಸಮಯಾವಕಾಶ ಇತ್ತಾದರೂ, ಜಿಲ್ಲಾಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡು, ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಎಂಟು ದಿನ ಮೊದಲೇ ಸ್ಥಗಿತಗೊಳಿಸಿದ್ದರು. ಇದರಿಂದ ರೈತರ ಹಕ್ಕಿಗೆ ಧಕ್ಕೆಯಾಗಿದೆ’ ಎಂದರು.

‘ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ 1964ರ ಕಲಂ 94 ಎ(1)ಕ್ಕೆ ತಿದ್ದುಪಡಿ ಮಾಡಿ 2018ರ ಮಾರ್ಚ್‌ 17ರಿಂದ ಒಂದು ವರ್ಷದವರೆಗೆ, ಅಂದರೆ 2019 ಮಾರ್ಚ್ 16 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಕೇಂದ್ರ ಚುನಾವಣಾ ಆಯೋಗ 2019ರ ಮಾರ್ಚ್‌10ರಂದು ಚುನಾವಣೆ ಘೋಷಿಸಿದ್ದರಿಂದ, ನೀತಿ ಸಂಹಿತೆ ನೆಪವಾಗಿಟ್ಟು ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಕಾಯ್ದೆಯಲ್ಲಿರುವ ಅಂಶ ನೀತಿಸಂಹಿತೆಗೆ ಬಾಧಕ ಆಗುವುದಿಲ್ಲ’ ಎಂದು ಪ್ರತಾಪಚಂದ್ರ ಶೆಟ್ಟಿ ವಿವರಿಸಿದರು.

ADVERTISEMENT

ಅದಕ್ಕೆ ಸಚಿವರು, ‘ಮತ್ತೆ ಅವಧಿ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ, ತೀರ್ಮಾನಿಸಲಾಗುವುದು. ಬಾಕಿ ಇರುವ ಅರ್ಜಿಗಳ ಅಪ್‌ಲೋಡ್‌ ಮಾಡಲು ಕೂಡಾ ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.