ADVERTISEMENT

ಕಾಸು ಇದ್ದವರಿಗೆ ಕೃಷಿ ಭೂಮಿ: ದಿಕ್ಕು ತಪ್ಪಿದ ಭೂ ಸುಧಾರಣೆ ಹಾದಿ...

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 4:34 IST
Last Updated 15 ಜೂನ್ 2020, 4:34 IST
ಬೆಳಗಾವಿಯ ಸುರ್ವಣ ವಿಧಾನಸೌಧ ಸಮೀಪದ ಹಲಗಾ ಗ್ರಾಮದ ಕೃಷಿಕ ದಂಪತಿ ತಮ್ಮ ಕೃಷಿ ಭೂಮಿಯನ್ನು ಬೆಳೆಗಾಗಿ ಹದ ಮಾಡುತ್ತಿರುವುದು
ಬೆಳಗಾವಿಯ ಸುರ್ವಣ ವಿಧಾನಸೌಧ ಸಮೀಪದ ಹಲಗಾ ಗ್ರಾಮದ ಕೃಷಿಕ ದಂಪತಿ ತಮ್ಮ ಕೃಷಿ ಭೂಮಿಯನ್ನು ಬೆಳೆಗಾಗಿ ಹದ ಮಾಡುತ್ತಿರುವುದು    
""

ಕೃಷಿಗೆ ಸಂಬಂಧಿಸಿದ ಎರಡು ಕಾಯ್ದೆಗಳಿಗೆ ತಿದ್ದುಪಡಿ ತರುವ ಕರ್ನಾಟಕ ಸರ್ಕಾರದ ನಿರ್ಧಾರವು ಜನ ಸಾಮಾನ್ಯರ ಹಿತಕ್ಕಾಗಿ ಅಲ್ಲ ಎನ್ನುವ ಆತಂಕ ಸೃಷ್ಟಿಯಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯ ಹಲ್ಲುಗಳನ್ನೆಲ್ಲಾ ಮುರಿದು ಹಾಕಿರುವುದು ಅಂತಹ ಒಂದು ತಿದ್ದುಪಡಿ. ರೈತನ ಹಿತಕ್ಕಾಗಿ ಈ ತಿದ್ದುಪಡಿ ಮಾಡಲಾಗಿದೆ ಎಂಬುದು ಇಲ್ಲಿ ಸರ್ಕಾರ ಕೊಟ್ಟ ಕಾರಣ. ‘ಈ ನಿಯಂತ್ರಿತ ಮಾರುಕಟ್ಟೆಗಳಲ್ಲಿಯೇ ರೈತ ಶೋಷಣೆಗೆ ಒಳಗಾಗುತ್ತಾನೆ. ಆದ್ದರಿಂದ ರೈತ ತನ್ನ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು’ ಎಂಬುದು ತಿದ್ದುಪಡಿ. ಆದರೆ ಈ ತಿದ್ದುಪಡಿಯ ಮೂಲಕ ಬಂಡವಾಳಶಾಹಿಗಳ ವ್ಯವಹಾರಗಳಿಗೆ ಇನ್ನೂ ಸುಗಮ ದಾರಿ ರೂಪಿಸಲಾಗಿದೆ. ರೈತನಿಗೆ ಯಾವುದೇ ಪರಿಣಾಮಕಾರಿ ಲಾಭ ಈ ತಿದ್ದುಪಡಿಯಿಂದ ಸಿಗುವುದು ಸಾಧ್ಯವಿಲ್ಲ.

ಬಿ.ಆರ್.ಜಯಂತ್

ಹಾಗೆಯೇ, ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ತರುತ್ತಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ. ನಿಜವಾದ ರೈತನ ಮಾಲೀಕತ್ವದಲ್ಲಿಯೇ ಭೂಮಿ ಇರಬೇಕು. ಯಾವ ಕೈಗಳು ಭೂಮಿಯಲ್ಲಿ ಉಳುಮೆ ಮಾಡುತ್ತವೆಯೋ ಆ ಕೈಗಳ ಕುಟುಂಬವೇ ರೈತ ಕುಟುಂಬ. ಈ ಕುಟುಂಬದ ಕೈಯಲ್ಲೇ ಕೃಷಿಭೂಮಿ ಇರಬೇಕು ಎಂಬುದು ಭೂ ಸುಧಾರಣಾ ಕಾಯ್ದೆಯ ಪ್ರಮುಖ ಆಶಯ.

ಭೂ ಸುಧಾರಣೆಯ ಚರ್ಚೆ ಆರಂಭವಾದದ್ದೇ ಉಳುವವರ ಹೋರಾಟದ ಮೂಲಕ. ‘ಉಳುವವನೇ ಹೊಲದೊಡೆಯ’ ಎನ್ನುವ ಗೇಣಿದಾರರ ಘೋಷಣೆಯೊಂದಿಗೆ ಐತಿಹಾಸಿಕ ಕಾಗೋಡು ಸತ್ಯಾಗ್ರಹ ಆರಂಭವಾಗಿದ್ದು ಮಲೆನಾಡಿನ ನೆಲದಲ್ಲಿ.

ADVERTISEMENT

1950ರ ದಶಕದ ಆರಂಭದಲ್ಲಿ ಭೂಮಿಯ ಬಹುಪಾಲು ಒಡೆತನ ಒಂದು ವರ್ಗದವರ ಕೈಯಲ್ಲಿದ್ದರೆ, ಅದರ ಉಳುಮೆ ಮಾಡುತ್ತಿದ್ದುದ್ದು ಮತ್ತೊಂದು ವರ್ಗವಾಗಿತ್ತು. ಉಳುಮೆ ಮಾಡುವ ಗೇಣಿದಾರರು ಪ್ರತಿಫಲವಾಗಿ ಜಮೀನುದಾರರಿಗೆ ‘ಗೇಣಿ’ ಕೊಡುವ ಪದ್ಧತಿ ಚಾಲ್ತಿಯಲ್ಲಿತ್ತು. ಗೇಣಿ ಕೊಡುವ ವಿಷಯದಲ್ಲಿ ಉಂಟಾದ ತಾರತಮ್ಯದ ವಿರುದ್ಧದ ಹೋರಾಟದ ಕಿಡಿ, ಮುಂದೆ ಕಾಗೋಡು ಸತ್ಯಾಗ್ರಹದ ರೂಪದಲ್ಲಿ ಬೃಹತ್ ಆಂದೋಲನವಾಗಿ ಬೆಳೆಯಿತು.

1951-52ರಲ್ಲಿ ಡಾ. ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಶಾಂತವೇರಿ ಗೋಪಾಲಗೌಡರಂತಹ
ಸಮಾಜವಾದಿ ನಾಯಕರಿಂದ ಕಾಗೋಡು ಸತ್ಯಾಗ್ರಹಕ್ಕೆ ತಾತ್ವಿಕ ನೆಲೆಗಟ್ಟು ಒದಗಿತು; ಮುಂದೆ ಅದು ಭೂ ಸುಧಾರಣೆ ಕಾಯ್ದೆ ಜಾರಿಯಾಗಲು ಕಾರಣವಾಯಿತು.

1974ರಲ್ಲಿ ದೇವರಾಜ ಅರಸು ಸರ್ಕಾರ ‘ಉಳುವವನೇ ಹೊಲದೊಡೆಯ’ ಘೋಷಣೆಗೆ ಭೂ ಸುಧಾರಣೆ ಕಾಯ್ದೆ ಮೂಲಕ ಸಾಂವಿಧಾನಿಕ ಮಾನ್ಯತೆ ಕೊಟ್ಟಿದ್ದು ಹೋರಾಟದ ಗುರಿ ಈ ಮೂಲಕ ಸಾಕಾರಗೊಂಡಿದ್ದು ಒಂದು ರೋಚಕ ಸಾಧನೆಯೇ.

ಈ ಸಾಧನೆಯ ಹಿಂದೆ ಅಂದು ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪ, ಸುಬ್ಬಯ್ಯ ಶೆಟ್ಟಿ, ಪಿ.ಸಿ.ಶೆಟ್ಟರ್, ಡಿ.ಬಿ.ಕಲ್ಮಣಕರ್, ಬಿ.ವಿ.ಕಕ್ಕಿಲ್ಲಾಯ, ಸಿ. ಬೈರೇಗೌಡ ಮೊದಲಾದವರ ಪಾತ್ರ ಪ್ರಮುಖವಾಗಿದೆ. ಅನೇಕರ ಪ್ರಬಲ ವಿರೋಧದ ನಡುವೆಯೂ ಈ ಕಾಯ್ದೆ ಜಾರಿಗೆ ಬಂದಿತು.

ಆರಂಭದಲ್ಲಿ ಗೇಣಿದಾರರಿಗೆ ಭೂಮಿಯ ಹಕ್ಕು ನೀಡಲು ಗೇಣಿದಾರರ ಹೆಸರಿನಲ್ಲಿ ಪಹಣಿ ಅಥವಾ ಗೇಣಿ ರಶೀದಿಯ ದಾಖಲೆ ಇರಬೇಕು ಎಂಬ ನಿಬಂಧನೆ ಇತ್ತು. ಆದರೆ, ಬಹುತೇಕ ಗೇಣಿದಾರರಿಗೆ ಭೂ ಮಾಲಿಕರು ರಶೀದಿ ನೀಡುತ್ತಿರಲಿಲ್ಲ. ಹೆಚ್ಚಿನ ಗೇಣಿದಾರನ ಹೆಸರಿನಲ್ಲಿ ಪಹಣಿಯೂ ಇರಲಿಲ್ಲ. ಯಾರು ಭೂಮಿಯನ್ನು ಸ್ವಾಧೀನ ಹೊಂದಿ ಉಳುಮೆ ಮಾಡುತ್ತಿದ್ದಾರೋ ಅಂತಹವರಿಗೆ ಭೂಮಿಯ ಹಕ್ಕು ನೀಡಬೇಕು ಎಂದು ಆದೇಶ ಹೊರಡಿಸಿದ್ದು ಅರಸು ಸರ್ಕಾರದ ಮಹತ್ ಸಾಧನೆ.

ಈ ಮೂಲಕ ದುಡಿಯುವ ಕೈಗಳಿಗೆ ಭೂಮಿಯ ಹಕ್ಕು ದೊರೆಯುವಂತಾಯಿತು. ಮುಂದೆ ಜಾರಿಗೆ ಬಂದ ಅಕ್ರಮ ಸಾಗುವಳಿ ಸಕ್ರಮೀಕರಣ ಕಾಯ್ದೆ, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕು ಮಾನ್ಯ ಮಾಡುವ) ಅಧಿನಿಯಮ 2006 ಇವೆಲ್ಲವೂ ಭೂ ಸುಧಾರಣೆ ಕಾನೂನಿನ ಆಶಯದಿಂದ ಪ್ರೇರಣೆ ಪಡೆದಿರುವ ಕಾಯ್ದೆಗಳೇ ಆಗಿವೆ.

ಭೂಮಿಯ ಮೇಲೆ ದುಡಿದು ದೇಶಕ್ಕೆ ಅನ್ನ ಗಳಿಸಿಕೊಡುವ ರೈತನ ಕೈ ಬಲ ಪಡಿಸುವ ಮೇಲಿನ ಎರಡು ಕಾಯ್ದೆಗಳು ನ್ಯಾಯಬದ್ಧವಾಗಿ ಜಾರಿಯಾಗಬೇಕಿತ್ತು. ಈಗಿರುವ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಈ ಕಾಯ್ದೆಗಳ ಜಾರಿಗೆ ಆಸಕ್ತಿ ತೋರುತ್ತಿಲ್ಲ. ಅರಣ್ಯ ಹಕ್ಕು ಕಾಯ್ದೆಯಂತೂ ಅಧಿಕಾರಿಗಳ ಅಸಹಕಾರದಿಂದ ಪೂರ್ಣ ವಿಫಲಗೊಂಡಿದೆ. ಹೀಗಾಗಿ ಹಲವು ವರ್ಷಗಳಿಂದ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವವರನ್ನು, ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ.

ಗಮನಾರ್ಹ ಅಂಶವೆಂದರೆ 1974ರ ಭೂ ಸುಧಾರಣೆ, ಅಕ್ರಮ ಸಾಗುವಳಿ ಸಕ್ರಮೀಕರಣ, ಅರಣ್ಯ ಹಕ್ಕು ಕಾಯ್ದೆಗಳ ಮುಖಾಂತರ ರೈತರು ಮತ್ತು ಭೂಹೀನರು ಕೇಳುತ್ತಿರುವ ಹಕ್ಕು ಸರಿಯಾಗಿ ಜಾರಿಯಾದರೂ ಬಹುಪಾಲು ಅರ್ಜಿದಾರರ ಒಟ್ಟು ಹಿಡುವಳಿಯ ವಿಸ್ತೀರ್ಣವು ಸರ್ಕಾರ ವಿಧಿಸಿದ ಯುನಿಟ್ ಮಿತಿಯ ವಿಸ್ತೀರ್ಣಕ್ಕಿಂತ ಕಡಿಮೆ ಆಗುತ್ತದೆ. ಅಂದರೆ ದುಡಿಮೆ ಮಾಡುವ ಕೈಗಳಿಗೆ ಭೂಮಿ ಹಂಚಿಕೆ ಸರಿಯಾಗಿ ಆಗಲಿಲ್ಲ. ಜಮೀನು ಕೊಟ್ಟಿದ್ದರೂ ಅದು ಕಡಿಮೆಯೇ.

ಯಡಿಯೂರಪ್ಪ ನೇತೃತ್ವದ ಸರ್ಕಾರ ತರುವ ತಿದ್ದುಪಡಿಯಿಂದ ಸಣ್ಣ, ಬಡ ರೈತರಿಗೆ ಸಮರ್ಪಕ ಭೂ ಹಂಚಿಕೆ ಆಗಲು ಸಾಧ್ಯವಿಲ್ಲ. ಬದಲಿಗೆ ಅಪಾರ ಪ್ರಮಾಣದ ಕಪ್ಪು ಹಣವನ್ನು ಕೃಷಿಭೂಮಿ ಖರೀದಿಗೆ ವ್ಯಯಿಸುವವರು ತಿದ್ದುಪಡಿಯ ಲಾಭವನ್ನು ಪಡೆಯುವುದು ಖಚಿತ.

ಶ್ರೀಮಂತರ, ಕಾರ್ಪೊರೇಟ್ ವಲಯದ ಕಬಂಧ ಬಾಹುಗಳು ಅನ್ನ ಬೆಳೆಯುವ ಸಣ್ಣ ರೈತರ ಭೂಮಿಯನ್ನು ಕಬಳಿಸಲಿವೆ. ಸಣ್ಣ ರೈತರು ಹಣದಾಸೆಗೆ ಬಲಿಯಾಗಿ ಭೂಮಿ ಕಳೆದುಕೊಂಡು 1974ರ ಪೂರ್ವದ ಗೇಣಿದಾರನ ಸ್ಥಿತಿಗೆ ಅಲ್ಲದಿದ್ದರೂ ಮತ್ತೊಂದು ಸ್ವರೂಪದ ಶೋಷಣೆಗೆ ಗುರಿಯಾಗುವುದರಲ್ಲಿ ಅನುಮಾನವಿಲ್ಲ.

ಅಲ್ಲದೆ, ಕರ್ನಾಟಕದಲ್ಲಿ ಮಾದರಿಯಾಗಿ ನಡೆದುಬಂದ ಭೂ ಸುಧಾರಣೆ ಹಾದಿಯ ದಿಕ್ಕು ತಪ್ಪಿಸಿ ಪುನಃ ವಿರುದ್ದ ದಿಕ್ಕಿನಲ್ಲಿ ಚಲಿಸುವ, ಬಂಡವಾಳಶಾಹಿ ವ್ಯವಸ್ಥೆಗೆ ತಳ್ಳುವ ಹುನ್ನಾರ ತಿದ್ದುಪಡಿಯ ಹಿಂದೆ ಇದೆ ಎಂಬ ಆತಂಕ ಸೃಷ್ಟಿಯಾಗಿರುವುದು ಸ್ಪಷ್ಟ.

ಲೇಖಕ: ಸಮಾಜವಾದಿ ಚಳವಳಿಯಲ್ಲಿದ್ದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.