ADVERTISEMENT

ಹಾಸನ,ಬೆಳಗಾವಿ,ಉತ್ತರ ಕನ್ನಡ,ರಾಮನಗರ,ತುಮಕೂರಿನಲ್ಲಿ ಮರು ಭೂಮಾಪನಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 10:58 IST
Last Updated 2 ಆಗಸ್ಟ್ 2018, 10:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಾಸನ, ಬೆಳಗಾವಿ, ಉತ್ತರ ಕನ್ನಡ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮರು ಭೂಮಾಪನ ಕಾರ್ಯ ನಡೆಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

‘ಮರು ಭೂಮಾಪನ ಮತ್ತು ಟಿಪ್ಪಣಿಗಳ ಗಣಕೀಕರಣ ಮಾಡುವ ಈ ಯೋಜನೆಗೆ ಕೇಂದ್ರ ಸರ್ಕಾರವು ಡಿಐಎಲ್ಆರ್‍ಎಂಪಿ (ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡರ್ನೈಸೇಷನ್ ಪ್ರೋಗ್ರಾಂ) ಯೋಜನೆಯಡಿ ₹24 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಯೋಜನೆಯಡಿ, ಇಲಾಖೆಯಲ್ಲಿ ಲಭ್ಯವಿರುವ ಹಳೆಯ ಮೂಲ ದಾಖಲೆಗಳನ್ನು ಅಪ್‍ಡೇಟ್‌ ಮಾಡಲು ಉದ್ದೇಶಿಸಲಾಗಿದೆ’ ಎಂದಿದ್ದಾರೆ.

ರಾಜ್ಯದೆಲ್ಲೆಡೆ ಹಂತಹಂತವಾಗಿ ಮರು ಭೂಮಾಪನ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ ತಿಳಿಸಿದ್ದರು. 14 ಜಿಲ್ಲೆಗಳ 27 ಗ್ರಾಮಗಳಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಪ್ರಾಯೋಗಿಕವಾಗಿ ಮರು ಭೂಮಾಪನ ಕಾರ್ಯ ನಡೆಸಲಾಗಿತ್ತು.

ADVERTISEMENT

ಕಂದಾಯ ಅದಾಲತ್: ಗಣಕೀಕೃತ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು, ಬೆಂಗಳೂರು ನಗರ ಜಿಲ್ಲೆ ಬಿಟ್ಟು ರಾಜ್ಯದಾದ್ಯಂತ ಆರು ತಿಂಗಳು ಕಂದಾಯ ಅದಾಲತ್ ನಡೆಸಬೇಕು ಎಂದು ಸೂಚಿಸಿದ್ದಾರೆ. ಎಲ್ಲ ತಾಲ್ಲೂಕುಗಳ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ ಮಟ್ಟದಲ್ಲಿ ಪಹಣಿಗಳಲ್ಲಿರುವ ತಪ್ಪುಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.