ADVERTISEMENT

ಭೂ ನ್ಯಾಯಾಲಯ: 1600 ಎಕರೆ ಸ್ವಾಧೀನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 21:37 IST
Last Updated 16 ಜೂನ್ 2020, 21:37 IST
   

ಬೆಂಗಳೂರು: ಸರ್ಕಾರದ ಜಾಗ ಒತ್ತುವರಿ ಮಾಡಿಕೊಂಡವರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲು ಅಸ್ತಿತ್ವಕ್ಕೆ ಬಂದ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳಲ್ಲಿ 2,600 ಪ್ರಕರಣಗಳು ಇತ್ಯರ್ಥಗೊಂಡಿವೆ. ಆ ಮೂಲಕ 1,600 ಎಕರೆ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

‘ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ– 2011’ ಅಡಿ ಎರಡು ಪ್ರತ್ಯೇಕ ಪ್ರಧಾನ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ 2016ರ ಅಕ್ಟೋಬರ್‌ನಿಂದ ಇಲ್ಲಿಯವರೆಗೆ 35,724 ಪ್ರಕರಣಗಳು ದಾಖಲಾಗಿವೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಬಿ.ಎಸ್‌. ಪಾಟೀಲ ಹಾಗೂ ಶೈಲಜಾ ಕೃಷ್ಣ ನಾಯಕ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿ39 ಪ್ರಕರಣಗಳಲ್ಲಿ ಒತ್ತುವರಿದಾರರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘ಬೆಂಗಳೂರು ದಕ್ಷಿಣ ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ 565 ಎಕರೆ ಜಾಗ ಇದ್ದು, ಇದು ಒತ್ತುವರಿದಾರರ ಪಾಲಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾ‌ಗಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ನಗರ ಜಿಲ್ಲಾಡಳಿತ 110 ಎಕರೆಯನ್ನು ಸರ್ಕಾರದ ವಶಕ್ಕೆ ಪಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಕಬಳಿಕೆಯಾಗಿದ್ದ 235 ಎಕರೆಯನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಅಮೃತ ಮಹಲ್‌ ಕಾವಲ್‌ನ 400 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ರಾಜ್ಯದ ವಿವಿಧ ಕೆರೆಗಳ 200 ಎಕರೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ‘ ಎಂದು ಬಿ.ಎಸ್.ಪಾಟೀಲ ತಿಳಿಸಿದರು.

‘ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯವು ಒತ್ತುವರಿದಾರರಿಗೆ ನಡುಕ ಹುಟ್ಟಿಸಿದೆ. ಒತ್ತುವರಿ ತೆರವಿಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೂ ನೋಟಿಸ್‌ ನೀಡಿದೆ‘ ಎಂದು ಹೇಳಿದರು.

‌ಹಿನ್ನೆಲೆ: ಸರ್ಕಾರಿ ಭೂಮಿ ಕಬಳಿಕೆಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ‘ಕರ್ನಾಟಕ ಭೂಕಬಳಿಕೆ (ನಿಷೇಧ) ಮಸೂದೆ–2007’ಕ್ಕೆ ವಿಧಾನಮಂಡಲದ ಉಭಯ ಸದನಗಳೂ ಒಪ್ಪಿಗೆ ನೀಡಿದ್ದವು. ಬಳಿಕ ಮಸೂದೆಯನ್ನು ರಾಷ್ಟ್ರಪತಿಯವರ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ನಾಲ್ಕು ವರ್ಷಗಳ ಕಾಲ ಮಸೂದೆ ಕೇಂದ್ರ ಸರ್ಕಾರದ ಬಳಿಯೇ ಇತ್ತು. ಬಳಿಕ ಒಪ್ಪಿಗೆ ನೀಡಿತ್ತು. ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹಾಗೂ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ 2014ರಲ್ಲಿ 39 ದಿನಗಳ ಹೋರಾಟ ನಡೆದಿತ್ತು. ಹೋರಾಟಕ್ಕೆ ಮಣಿದ ಸರ್ಕಾರ, ನ್ಯಾಯಾಲಯ ಸ್ಥಾಪಿಸಲು ನಿರ್ಧರಿಸಿತ್ತು. 2016ರಲ್ಲಿ ನ್ಯಾಯಾಲಯ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.