ADVERTISEMENT

ಭಾಷೆಯನ್ನು ಹೇರಬಾರದು: ತ್ರಿಭಾಷಾ ಸೂತ್ರದ ಬಗ್ಗೆ ಸಿಎಂ ಟ್ವೀಟ್‌ 

ತ್ರಿಭಾಷಾ ನೀತಿಯ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆಯಲು ಸಿಎಂಗೆ ನೆಟ್ಟಿಗರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 16:46 IST
Last Updated 2 ಜೂನ್ 2019, 16:46 IST
   

ಬೆಂಗಳೂರು:ತ್ರಿಭಾಷಾ ಸೂತ್ರದ ಅನ್ವಯ ಹಿಂದಿಯನ್ನು ಕಡ್ಡಾಯವಾಗಿ ಬೋಧಿಸುವ ಕೇಂದ್ರದ ಪ್ರಸ್ತಾವದ ಬಗ್ಗೆ ಮೊದಲಬಾರಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು,‘ಯಾವುದೇ ಭಾಷೆಯನ್ನು ಯಾವುದೇ ಕಾರಣಕ್ಕೂ ಹೇರಬಾರದು,’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಸ್ರೋದ ಮಾಜಿ ಅಧ್ಯಕ್ಷರಾದ ಕೆ. ಕಸ್ತೂರಿರಂಗನ್‌ ಅವರ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಹಿಂದಿ ಭಾಷಿಕವಲ್ಲದ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರದ ಅನ್ವಯ ಹಿಂದಿಯನ್ನು ಕಡ್ಡಾಯವಾಗಿ ಬೋಧನೆ ಮಾಡುವ ಕುರಿತು ಪ್ರಸ್ತಾಪಿಸಲಾಗಿದೆ. ಇದರ ವಿರುದ್ಧ ತಮಿಳುನಾಡು ಈಗಾಗಲೇ ಸಿಡಿದೆದ್ದಿದೆ. ಭಾರಿ ದೊಡ್ಡ ಪ್ರಮಾಣದಲ್ಲಿ ಚಳವಳಿಗಳು, ಸಾಮಾಜಿಕ ತಾಣಗಳಲ್ಲಿ #StopHindiImposition ಎಂಬ ಹ್ಯಾಷ್‌ ಟ್ಯಾಗ್‌ನಡಿಯಲ್ಲಿಅಭಿಯಾನಗಳು ಆರಂಭವಾಗಿವೆ. ಸದ್ಯ ಈ ಕುರಿತು ಮೊದಲ ಬಾರಿಗೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ‘ಭಾಷೆಯನ್ನು ಹೇರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಪ್ರಸ್ತಾವಿತ ತ್ರಿಭಾಷಾ ನೀತಿಯ ಕುರಿತು ಹೆಚ್ಚಿನ ಮಾಹಿತಿ ಪಡೆದು ಕೇಂದ್ರಕ್ಕೆ ರಾಜ್ಯದ ನಿಲುವು ತಿಳಿಸುತ್ತೇವೆ,’ ಎಂದು ಹೇಳಿದ್ಧಾರೆ.

ಸಿಎಂ ಟ್ವೀಟ್‌ನಲ್ಲಿ ಏನಿದೆ

ADVERTISEMENT

‘ನಿನ್ನೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಆಂಶವಿರುವುದು ನನ್ನ ಗಮನಕ್ಕೆ ಬಂದಿದೆ. ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು,’ ಎಂದು ಅವರು ಬರೆದುಕೊಂಡಿದ್ದಾರೆ.

ಕುಮಾರಸ್ವಾಮಿ ಅವರ ಈ ಟ್ವೀಟ್‌ಗೆ ನೆಟ್ಟಿಗರಿಂದ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಈ ನಿಲುವನ್ನು ಬೆಂಬಲಿಸಿದ್ದರೆ, ಇನ್ನು ಕೆಲವರು ತ್ರಿಭಾಷಾ ಸೂತ್ರದ ವಿರುದ್ಧ ಸ್ಪಷ್ಟವಾದ ನಿಲುವನ್ನು ಮುಖ್ಯಮಂತ್ರಿಗಳು ತಳೆಯಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಹಿಂದಿಯನ್ನು ಕಡ್ಡಾಯಗೊಳಿಸಿರುವುದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.