ADVERTISEMENT

ಮೈಸೂರಿನಲ್ಲೂ ಲ್ಯಾಂಟರ್ನ್‌ ಪಾರ್ಕ್‌

ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಈ ಬಾರಿ ಬಣ್ಣದ ರಂಗು

ಕೆ.ಓಂಕಾರ ಮೂರ್ತಿ
Published 8 ಅಕ್ಟೋಬರ್ 2018, 17:07 IST
Last Updated 8 ಅಕ್ಟೋಬರ್ 2018, 17:07 IST
ಲ್ಯಾಂಟರ್ನ್‌ ಕಲಾಕೃತಿ
ಲ್ಯಾಂಟರ್ನ್‌ ಕಲಾಕೃತಿ   

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಆಯೋಜಿಸಲು ಉದ್ದೇಶಿಸಿರುವ ಲ್ಯಾಂಟರ್ನ್‌ ಉತ್ಸವ ಈ ಬಾರಿಯ ದಸರಾ ಮಹೋತ್ಸವಕ್ಕೆ ಮತ್ತಷ್ಟು ರಂಗು ತುಂಬಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆಯು ದಸರಾ ವಸ್ತುಪ್ರದರ್ಶನದ ಆವರಣದಲ್ಲಿ 90 ದಿನ ಬಣ್ಣದ ಬೆಳಕಿನ ಉತ್ಸವ ಹಮ್ಮಿಕೊಂಡಿದೆ.

ವಸ್ತುಪ್ರದರ್ಶನಕ್ಕೆ ಅ.10ರಂದು ಚಾಲನೆ ದೊರೆಯಲಿದ್ದು, 15 ಸಾವಿರ ಚದರ ಅಡಿ ಪ್ರದೇಶದಲ್ಲಿ ‘ಲ್ಯಾಂಟರ್ನ್‌ ಪಾರ್ಕ್‌’ ನಿರ್ಮಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಜಾಗದಲ್ಲಿ ಚೀನಾ ದೇಶದ ಓಷಿಯನ್‌ ಆರ್ಟ್‌ ಕಂಪನಿಯ 19 ಪರಿಣತರು ಬಣ್ಣ ಹಾಗೂ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಲಿದ್ದಾರೆ.

ADVERTISEMENT

ಲ್ಯಾಂಟರ್ನ್‌ ಉತ್ಸವದ ಮೂಲಕ ಚೀನಾದವರು ಹೊಸ ವರ್ಷ ಸ್ವಾಗತಿಸುವುದು ವಾಡಿಕೆ. ವಸಂತಕಾಲವನ್ನು ಬಣ್ಣಗಳ ಬೆಳಕು, ಸಂಗೀತದೊಂದಿಗೆ ಬರಮಾಡಿಕೊಳ್ಳುತ್ತಾರೆ. ಅದೇ ಮಾದರಿಯಲ್ಲಿ ಮೈಸೂರಿನ ದಸರೆಗೆ ಮೆರುಗು ನೀಡಲು ಆಯೋಜಕರು ಮುಂದಾಗಿದ್ದಾರೆ.

‘ವಸ್ತುಪ್ರದರ್ಶನಕ್ಕೆ ಹೊಸತನ ತರುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದೆ. ಉತ್ಸವಕ್ಕೆ ಬೇಕಾದ ಸಾಮಗ್ರಿಗಳೂ ಇಲ್ಲಿ ದೊರೆಯುವುದಿಲ್ಲ. ತಾಂತ್ರಿಕ ಪರಿಣತರು ಇಲ್ಲಿಲ್ಲ. ಹೀಗಾಗಿ, ಚೀನಾದಿಂದಲೇ ಆಹ್ವಾನಿಸಿದ್ದೇವೆ. ಪ್ರವಾಸಿಗರಿಗೆ ಈ ಬಾರಿಯ ದಸರೆ ಕೊಡುಗೆ ಇದು’ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು ‘ಪ್ರಜಾವಾಣಿ’ಗೆ ತಿಳಿಸಿದರು.

‘ಡ್ರೀಮ್‌ ಪೆಟಲ್ಸ್‌’ ಎಂಬ ಸಂಸ್ಥೆಗೆ ಲ್ಯಾಂಟರ್ನ್‌ ಪಾರ್ಕ್‌ ನಿರ್ಮಿಸುವ ಜವಾಬ್ದಾರಿ ನೀಡಲಾಗಿದೆ. ಉತ್ಸವದಲ್ಲಿ ವಿವಿಧ ಗಾತ್ರದ ವರ್ಣರಂಜಿತ ಲ್ಯಾಂಟರ್ನ್‌ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ದಸರೆಯನ್ನು ಆಧಾರವಾಗಿಟ್ಟುಕೊಂಡು ಬಣ್ಣದ ಬೆಳಕಿನ ಕಲಾಕೃತಿ ರಚಿಸಲಾಗುತ್ತಿದೆ.

‘ಸುಮಾರು 5 ಸಾವಿರ ಎಲ್‌ಇಡಿ ಬಲ್ಬು ಬಳಸಿ ಗುಲಾಬಿ ಉದ್ಯಾನ ನಿರ್ಮಿಸಲಾಗುತ್ತಿದೆ. ಜಂಬೂಸವಾರಿ, ಮಹಿಷಾಸುರ ಮರ್ದಿನಿ, ಡೊಳ್ಳು ಕುಣಿತ, ಪೂಜಾ ಕುಣಿತದ ಕಲಾಕೃತಿಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಅಲ್ಲದೆ, ಬಣ್ಣದ ಬೆಳಕಿನಲ್ಲಿ ಮೈಸೂರು ಇತಿಹಾಸ, ದಸರಾ ಇತಿಹಾಸವನ್ನು ಬಿಂಬಿಸಲು ಸಿದ್ಧತೆ ನಡೆದಿದೆ. ಇದೇ ಮೊದಲ ಬಾರಿ ಭಾರತದಲ್ಲಿ ಲ್ಯಾಂಟರ್ನ್‌ ಪಾರ್ಕ್‌ ನಿರ್ಮಿಸಲಾಗುತ್ತಿದೆ’ ಎಂದು ‘ಡ್ರೀಮ್‌ ಪೆಟಲ್ಸ್‌’ ಸಂಸ್ಥೆಯ ನಿಖಿಲಾ ಮಾಹಿತಿ ನೀಡಿದರು.

*ಇಂಥ ಉತ್ಸವ ರಾಜ್ಯದಲ್ಲಿ ಹಿಂದೆ ಎಲ್ಲೂ ನಡೆದಿಲ್ಲ. ದಸರಾ ವಸ್ತುಪ್ರದರ್ಶನದಲ್ಲಿ ಇದು ಈ ಬಾರಿ ಹೊಸ ಆಕರ್ಷಣೆ

-ಬಿ.ರಾಮು, ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.