ADVERTISEMENT

ನೆಲಮಂಗಲದ ವಕೀಲ ಅಮಿತ್‌ ಕೇಶವಮೂರ್ತಿ ಕೊಲೆ ಪ್ರಕರಣ: ರಾಜೇಶ್‌ ದೋಷಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 14:32 IST
Last Updated 15 ನವೆಂಬರ್ 2023, 14:32 IST
ಲೋಕಪಾಲ ನೇಮಕ: ಕೋರ್ಟ್ ಸಲಹೆ ಗಂಭೀರವಾಗಿ ಪರಿಗಣಿಸಿ
ಲೋಕಪಾಲ ನೇಮಕ: ಕೋರ್ಟ್ ಸಲಹೆ ಗಂಭೀರವಾಗಿ ಪರಿಗಣಿಸಿ   

ಬೆಂಗಳೂರು: ನೆಲಮಂಗಲದ ಖ್ಯಾತ ವಕೀಲ ಕೇಶವಮೂರ್ತಿ ಅವರ ಪುತ್ರ ವಕೀಲ ಅಮಿತ್‌ ಕೇಶವಮೂರ್ತಿ ಕೊಲೆ ಪ್ರಕರಣದಲ್ಲಿ ಆರೋಪಿ ರಾಜೇಶ್‌ ಗೌಡ ದೋಷಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಮಾನಿಸಿದೆ.

ವಿಚಾರಣೆ ಪೂರ್ಣಗೊಳಿಸಿ ಈ ಕುರಿತಂತೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರು ಬುಧವಾರ ತೆರೆದ ನ್ಯಾಯಾಲಯದಲ್ಲಿ ಪ್ರಕಟಿಸಿ, ಶಿಕ್ಷೆಯ ಪ್ರಮಾಣವನ್ನು ಗುರುವಾರ (ನ.16) ಘೋಷಿಸುವುದಾಗಿ ತಿಳಿಸಿದರು. ಪ್ರಾಸಿಕ್ಯೂಷನ್‌ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ವಾದ ಮಂಡಿಸಿದ್ದರು.

ಏನಿದು ಘಟನೆ?: ‘ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಚಾರ್ಯ ಎಂಜಿನಿಯರಿಂಗ್ ಕಾಲೇಜು ಬಳಿ 2017ರ ಜನವರಿ 13ರಂದು ಮಧ್ಯಾಹ್ನ 3.15ರ ಸಮಯದಲ್ಲಿ ಅಮಿತ್‌ ಕೇಶವಮೂರ್ತಿ ಅವರು ಆರೋಪಿ ರಾಜೇಶ್‌ ಅವರ ಪತ್ನಿ ಪಿಡಿಒ ಶ್ರುತಿಗೌಡ ಅವರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಕುಳಿತಿದ್ದರು. ಶ್ರುತಿ ಗೌಡ ಅವರಿಗೆ ಸೇರಿದ ಈ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ರಾಜೇಶ್, ಕಾರಿನ ಬಾಗಿಲು ತೆರೆದು ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಅಮಿತ್‌ ಮೇಲೆ ಏಕಾಏಕಿ ಗುಂಡು ಹಾರಿಸಿ ಕೊಂದಿದ್ದರು. ಶ್ರುತಿ ಗೌಡ ಅವರ ನಡೆ ಮತ್ತು ಚಟುವಟಿಕೆಗಳ ಮೇಲೆ ಸದಾ ಸಂಶಯ ವ್ಯಕ್ತಪಡಿಸುತ್ತಿದ್ದ ರಾಜೇಶ್‌, ಶ್ರುತಿ ಬಳಸುವ ಕಾರಿಗೆ ಜಿಪಿಎಸ್‌ ಅಳವಡಿಸಿ ಅದರ ಮುಖಾಂತರ ಅವರಿದ್ದ ಸ್ಥಳಕ್ಕೆ ಹಿಂಬಾಲಿಸಿಕೊಂಡು ಬಂದಿದ್ದರು. ಅಮಿತ್‌ ಮೃತಪಟ್ಟ ಸುದ್ದಿ ತಿಳಿದ ನಂತರ ಶ್ರುತಿಗೌಡ ಲಾಡ್ಜ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು‘ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದ ರಾಜೇಶ್‌ ತಂದೆ ಗೋಪಾಲಕೃಷ್ಣ (82) ವಿಚಾರಣೆಗೂ ಮುನ್ನವೇ ಸಾವನ್ನಪ್ಪಿದ್ದರು.

ADVERTISEMENT

ಅಮಿತ್ ಕೇಶವಮೂರ್ತಿ ಅಮೆರಿಕದಲ್ಲಿ ಎಲ್ಎಲ್ಎಂ ಸ್ನಾತಕೋತ್ತರ ಪದವಿ ಪಡೆದಿದ್ದರು. ನೆಲಮಂಗಲ ಮತ್ತು ಬೆಂಗಳೂರು ನಗರದಲ್ಲಿ ವಕೀಲಿಕೆ ನಡೆಸುತ್ತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.