ADVERTISEMENT

‘ವಕೀಲರೇ ಕಕ್ಷಿದಾರರ ಏಜೆಂಟರಾಗುವುದು ಸಲ್ಲ’

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 11:24 IST
Last Updated 30 ನವೆಂಬರ್ 2019, 11:24 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಶತಮಾನಗಳಿಂದ ವೃತ್ತಿ ಮೌಲ್ಯ ಕಾಪಾಡಿಕೊಂಡು ತನ್ನದೇ ಆದ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ವೃದ್ಧಿಸಿಕೊಂಡು ಬೆಳೆದಿರುವ ವಕೀಲಿಕೆ ಅತ್ಯಂತ ಶ್ರೇಷ್ಠವಾದದ್ದು, ಇಂತಹ ವೃತ್ತಿಯ ಗೌರವವನ್ನು ಎತ್ತಿ ಹಿಡಿಯಬೇಕಾದ ವಕೀಲರು, ಯಾವ ಕಕ್ಷಿದಾರರ ಪರ ವಾದ ಮಂಡಿಸಿ ಆ ವ್ಯಾಜ್ಯದಿಂದ ನಿವೃತ್ತರಾಗಿರುತ್ತಾರೊ ಅದೇ ಪ್ರಕರಣದಲ್ಲಿ ಅದೇ ಕಕ್ಷಿದಾರರ ಏಜೆಂಟ್‌ ಆಗಿ ಕೋರ್ಟ್‌ಗೆ ಸಾಕ್ಷ್ಯ ನುಡಿಯುವುದು ಸಲ್ಲ’ ಎಂದು ಹೈಕೋರ್ಟ್‌ ಹೇಳಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ನಗರದ ಐದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ನೀಡಿದ್ದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶ ನೀಡಿದೆ.

‘ಈ ಮೊದಲು ನನ್ನ ಕಕ್ಷಿದಾರರ ಪರ ವಾದ ಮಂಡಿಸುತ್ತಿದ್ದೆ. ಈಗ ನಿವೃತ್ತನಾಗಿದ್ದೇನೆ. ಆದರೆ ಇದೇ ಪ್ರಕರಣದಲ್ಲಿ ನನ್ನ ಕಕ್ಷಿದಾರರ ಪರ ಏಜೆಂಟ್‌ ಆಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು’ ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ನಿರ್ಬಂಧಿಸಿದೆ.

ADVERTISEMENT

‘ವಕೀಲರು ತಮ್ಮ ವೃತ್ತಿಯಲ್ಲಿ ಸಂಪೂರ್ಣ ನಿಷ್ಪಕ್ಷಪಾತದಿಂದ ನಡೆದುಕೊಳ್ಳಬೇಕು. ವಕೀಲರ ಸರ್ವೋತ್ಕೃಷ್ಟ ಕೆಲಸ ಎಂದರೆ ನ್ಯಾಯ ನಿರ್ವಹಣೆಯಲ್ಲಿ ಕಕ್ಷಿದಾರರ ಪರ ಕೋರ್ಟ್‌ಗೆ ಸಹಕರಿಸುವುದು ಮಾತ್ರವೇ ಆಗಿರುತ್ತದೆ. ಅದು ಬಿಟ್ಟು ಕಕ್ಷಿದಾರರ ಜೊತೆ ವೈಯಕ್ತಿಕವಾಗಿ ಗುರುತಿಸಿಕೊಳ್ಳುವುದಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.