ADVERTISEMENT

ರೀಲ್ಸ್‌: ವಕೀಲರಿಗೆ ಪರಿಷತ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 16:23 IST
Last Updated 19 ಆಗಸ್ಟ್ 2025, 16:23 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ವೃತ್ತಿನಿರತ ವಕೀಲರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ತಾವೇ ಉನ್ನತೀಕರಿಸಿಕೊಳ್ಳುವಂತಹ ಪ್ರಚಾರ ರೂಪದಲ್ಲಿನ ಯಾವುದೇ ರೀಲ್‌ಗಳು ಮತ್ತು ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದರೆ ಅಂತಹ ಆಕ್ಷೇಪಾರ್ಹ ರೀಲ್‌ಗಳು, ವಿಡಿಯೊ ಇತ್ಯಾದಿಗಳನ್ನು ತಕ್ಷಣವೇ ತೆಗೆದುಹಾಕಬೇಕು. ಇಲ್ಲವಾದರೆ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ವಕೀಲರ ಪರಿಷತ್ ರಾಜ್ಯದ ವಕೀಲ ವೃಂದಕ್ಕೆ ಎಚ್ಚರಿಸಿದೆ.

ಇತ್ತೀಚೆಗೆ ನಡೆದ ರಾಜ್ಯ ವಕೀಲರ ಪರಿಷತ್‌ನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಪರಿಷತ್‌ ಅಧ್ಯಕ್ಷ ಎಸ್‌.ಎಸ್‌.ಮಿಟ್ಟಲಕೋಡ್‌, ಸದಸ್ಯರಾದ ಎಂ.ದೇವರಾಜ್‌ ಮತ್ತು ಎಸ್‌.ಹರೀಶ್‌ ಅವರು ಹೇಳಿದ್ದಾರೆ.

‘ವಕೀಲರು ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಪ್ರಕಟಿಸುವುದು, ಕಿರು ವಿಡಿಯೊಗಳನ್ನು ಮಾಡುವುದು, ಕಾನೂನು ಸಲಹೆ ನೀಡುವ ರೀಲ್‌ಗಳು ಮತ್ತು ಅವುಗಳನ್ನು ಫೇಸ್‌ ಬುಕ್, ಎಕ್ಸ್‌, ಲಿಂಕ್ಡ್‌ ಇನ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ ಆ್ಯಪ್‌ ಗುಂಪುಗಳಲ್ಲಿ ಪ್ರಕಟಿಸುವಲ್ಲಿ ತೊಡಗಿಸಿಕೊಂಡಿರುವುದು ನಿಯಮಬಾಹಿರ’ ಎಂದು ವಿವರಿಸಿದ್ದಾರೆ.

ADVERTISEMENT

‘ತಮ್ಮ ಬಗ್ಗೆ ತಾವೇ ಪ್ರಚಾರ ಕೊಟ್ಟುಕೊಳ್ಳುವ ವಕೀಲರು  ಈ ಸಂಬಂಧ ರೂಪಿಸಲಾಗಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ, ಭಾರತೀಯ ವಕೀಲರ ಪರಿಷತ್‌, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಹಾಗೂ ವಕೀಲರ ಕಾಯ್ದೆ–1961ರ ಕಲಂ 35ರ ಅಡಿಯಲ್ಲಿ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.