ಬೆಂಗಳೂರು: ‘ಅಡ್ವೊಕೇಟ್ಸ್ ಅಕಾಡೆಮಿಗೆ ಬೆಂಗಳೂರಿನ ಹೊರಭಾಗದಲ್ಲಿ 20 ಕಿ.ಮೀ ವ್ಯಾಪ್ತಿಯಾಚೆಗೆ 10 ಎಕರೆ ಜಮೀನು ಕೊಡಿಸಲು ಕಂದಾಯ ಸಚಿವರ ಜೊತೆ ಮಾತನಾಡುತ್ತೇನೆ. ವಕೀಲರ ಕಲ್ಯಾಣಕ್ಕಾಗಿ ₹5 ಕೋಟಿ ನೀಡುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
‘ಬೆಂಗಳೂರು ವಕೀಲರ ಸಂಘ’ದ ವತಿಯಿಂದ ಸಿಟಿ ಸಿವಿಲ್ ಕೋರ್ಟ್ ಆವರಣದ ವಕೀಲರ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ತಮ್ಮ ಭಾಷಣದುದ್ದಕ್ಕೂ ಒಗಟು, ಪಾರಮಾರ್ಥ, ಸಂಸ್ಕೃತ ಸುಭಾಷಿತ ಮತ್ತು ಡಿವಿಜಿ ಅವರ ಕಗ್ಗಗಳನ್ನು ಉಲ್ಲೇಖಿಸಿದರು.
‘ಕೆಂಪೇಗೌಡ ಜಯಂತಿ ಆಚರಣೆ ಶುರು ಮಾಡಿದ್ದೇ ನಾನು. ಈ ಆಚರಣೆ ಬೆಂಗಳೂರಿಗೆ ಮಾತ್ರವಲ್ಲ. ರಾಜ್ಯಕ್ಕೂ ವಿಸ್ತರಣೆಯಾಗಬೇಕು. ಈ ನಗರ ಜ್ಞಾನ, ಸಂಪನ್ಮೂಲ ಮತ್ತು ಮಾನವ ಶಕ್ತಿಯನ್ನು ಹೊಂದಿದ, ದೇಶದಲ್ಲೇ ಅತ್ಯುತ್ತಮವಾದ ನಗರ. ಬೆಂಗಳೂರು ಇಂದು ವ್ಯಾಪಕವಾಗಿ ಬೆಳೆದಿದೆ. ಇಲ್ಲಿಗೆ ಬಂದ ಯಾರೂ ಕೂಡಾ ಇಲ್ಲಿಂದ ವಾಪಸು ಹೋಗುವುದಿಲ್ಲ. ಬೆಂಗಳೂರು ಅಭಿವೃದ್ಧಿ ಸಚಿವನಾಗಿ ಕೆಲಸ ಮಾಡುವಲ್ಲಿ ನನಗೆ ಅತೀವ ಆಸಕ್ತಿ ಇದೆ’ ಎಂದರು.
‘ರಾಜ್ಯ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.
ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಪ್ರಾಧ್ಯಾಪಕ ಎಂ.ಕೃಷ್ಣೇಗೌಡ, ನಟಿ ಪ್ರೇಮಾ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಖಜಾಂಚಿ ಪ್ರೇಮಾ ರವಿಶಂಕರ್, ಟಿ.ಅಂಜನಕುಮಾರ್ ಗೌಡ, ಎಸ್.ಎನ್.ರಾಕೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.