ADVERTISEMENT

ಹೋದಲ್ಲಿ ಬಂದಲ್ಲಿ ಈ ಬಾರಿ ನಿಮಗೇ ಟಿಕೆಟ್ ಎನ್ನಬೇಡಿ: ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 9:14 IST
Last Updated 21 ಫೆಬ್ರುವರಿ 2021, 9:14 IST
   

ಬೆಂಗಳೂರು: 'ಈ ಬಾರಿ ನಿನಗೇ ಟಿಕೆಟ್ ಎನ್ನುವ ಭರವಸೆಯನ್ನು ನಾಯಕರು ಹೋದಲ್ಲಿ ಬಂದಲ್ಲಿ ಕಾರ್ಯಕರ್ತರಿಗೆ ನೀಡಬಾರದು‌. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಎಲ್ಲರ ಒಪ್ಪಿಗೆ ಪಡೆದು ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಐವರು ಕಾರ್ಯಾಧ್ಯಕ್ಷರನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದರು.

'ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಇಡಬೇಕಾಗಿದೆ. ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಬೇಕು' ಎಂದರು.

ADVERTISEMENT

'ಜ. 26ರಂದು ದೆಹಲಿಯ ಕೆಂಪುಕೋಟೆ ಎದುರು ರೈತರು ಪ್ರತಿಭಟಿಸುತ್ತಿದ್ದ ವೇಳೆ ನಡೆದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನಡೆಸಿದ ಪಿತೂರಿಯೇ ಕಾರಣ' ಎಂದು ಅವರು ದೂರಿದರು.

'ಗಣರಾಜ್ಯೋತ್ಸವದ ದಿನ ಅತಿ ಬಿಗಿ ಬಂದೋಬಸ್ತ್ ಇರುತ್ತದೆ. ಯುವಕನೊಬ್ಬ ಟ್ರ್ಯಾಕ್ಟರ್ ತೆಗೆದುಕೊಂಡು, ಕೋಟೆಯ ಹತ್ತಿರ ಹೋಗಿ ಧ್ವಜ ಕಂಬ ಏರಿ ಧರ್ಮದ ಧ್ವಜವೊಂದನ್ನು ಹಾರಿಸುವವರೆಗೂ ಪೊಲೀಸರು ನಿದ್ದೆ ಮಾಡುತ್ತಿದ್ದರೆ? ಗುಪ್ತಚರ ಇಲಾಖೆಗೆ ಇದರ ಮಾಹಿತಿ ಇರಲಿಲ್ಲವೇ' ಎಂದು ಪ್ರಶ್ನಿಸಿದ ಅವರು, 'ಧ್ವಜ ಹಾರಿಸಿದ ವ್ಯಕ್ತಿ ನರೇಂದ್ರ ಮೋದಿಯವರೊಂದಿಗೆ ಅವರ ಮನೆಯಲ್ಲಿಯೇ ಫೋಟೊ ತೆಗೆಸಿಕೊಂಡಿದ್ದಾನೆ. ಅಂದಿನ ಘಟನೆ ವ್ಯವಸ್ಥಿತ ಪಿತೂರಿ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.