ADVERTISEMENT

ಬೋಧಕೇತರ ಹುದ್ದೆಗೆ ಪರಿವರ್ತನೆ: ಉಪನ್ಯಾಸಕರ ವಲಯದಿಂದ ತೀವ್ರ ಆಕ್ಷೇಪ

ಉಪನ್ಯಾಸಕರ ಕೊರತೆಯ ಮಧ್ಯೆಯೂ 44 ಹುದ್ದೆ ಬದಲಿಸಲು ಹುನ್ನಾರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 21:15 IST
Last Updated 27 ಫೆಬ್ರುವರಿ 2022, 21:15 IST
   

ಬೆಂಗಳೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಕಾಡುತ್ತಿರುವ ಮಧ್ಯೆ, 44 ಉಪನ್ಯಾಸಕ ಹುದ್ದೆಗಳನ್ನು ಬೋಧಕೇತರ ಹುದ್ದೆಗಳಾದ 'ಶಾಖಾಧಿಕಾರಿ’ ಹುದ್ದೆಗಳಾಗಿ ಪರಿವರ್ತಿಸಲು ನಿರ್ಧರಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ನಡೆಗೆ ಉಪನ್ಯಾಸಕರ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಇಲಾಖೆಯಲ್ಲಿ ಹಾಲಿ 58 ಅಧೀಕ್ಷಕ ಹುದ್ದೆಗಳು, 15 ಶಾಖಾಧಿಕಾರಿ ಹುದ್ದೆಗಳಿವೆ. 44 ಉಪನ್ಯಾಸಕ ಹುದ್ದೆಗಳನ್ನು ಶಾಖಾಧಿಕಾರಿ ಹುದ್ದೆಗಳಾಗಿ ಪರಿವರ್ತಿಸಿದರೆ, ಅಧೀಕ್ಷಕ ಹುದ್ದೆಗಳಿಗಿಂತ ಹೆಚ್ಚು ಶಾಖಾಧಿಕಾರಿ ಹುದ್ದೆಗಳನ್ನು ಸೃಷ್ಟಿಸಿದಂತಾಗುತ್ತದೆ. ಇದರಿಂದ ಶೇಕಡಾ 100ರಷ್ಟು ಪದೋನ್ನತಿಗಳು ಅಧೀಕ್ಷಕರಿಗೆ ಸಿಕ್ಕಂತಾಗುತ್ತದೆ. ಇದು ನಿಯಮಬಾಹಿರ ಕ್ರಮ ಎಂದು ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೋವಿಡ್‌ನಿಂದಾಗಿ ಸೂಕ್ತ ಕ್ರಮದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆದಿಲ್ಲ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಉತ್ತೀರ್ಣ ಮಾಡಲಾಗಿದ್ದು,‌ ಸರ್ಕಾರಿ ಕಾಲೇಜುಗಳಿಗೆ ದಾಖಲಾತಿ ಗಣನೀಯವಾಗಿ ಹೆಚ್ಚಾಗಿದೆ. ಹಲವು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಉಂಟಾಗಿದೆ. ಇಂಥ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಉಪನ್ಯಾಸಕ ಹುದ್ದೆಗಳನ್ನು ಬೋಧಕೇತರ ಹುದ್ದೆಗಳಾದ ಪರಿವರ್ತಿಸಲು ಹೊರಟಿರುವುದು ಸರಿಯಲ್ಲ. ಈ ಬಗ್ಗೆ ಸಚಿವರು ಮತ್ತು ಕಾರ್ಯದರ್ಶಿಯ ಗಮನಕ್ಕೆ ತರುತ್ತೇವೆ’ ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸಂಘಟನಾ ಕಾರ್ಯದರ್ಶಿ ಹಂ.ಗು. ರಾಜೇಶ್ ಹೇಳಿದ್ದಾರೆ.

ADVERTISEMENT

‘ಆರ್ಥಿಕ ಇಲಾಖೆಯ ಅನುಮೋದನೆ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬದಲಾವಣೆ ತರದೆ ಈ ರೀತಿ ಪರಿವರ್ತಿಸಲು ಹೊರಟಿರುವುದು ನಿಯಮ ಉಲ್ಲಂಘನೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ನಿಯಮಗಳನ್ನು ಅಧಿಕಾರಿಗಳು ಗಾಳಿಗೆ ತೂರಲು ಮುಂದಾಗಿದ್ದಾರೆ. ಪದೋನ್ನತಿಗಳು ಪಿರಮಿಡ್ ಮಾದರಿಯಲ್ಲಿ ಇರಬೇಕೆಂದು ಡಿಪಿಎಆರ್‌ ನಿಯಮದಲ್ಲಿದೆ. ಅದರ ಪ್ರಕಾರ 4 ಅಧೀಕ್ಷಕ ಹುದ್ದೆಗಳಿಗೆ ಒಂದು ಶಾಖಾಧಿಕಾರಿ ಹುದ್ದೆ ಇರಬೇಕು. ಆದರೆ, ಇಲ್ಲಿ 58 ಅಧೀಕ್ಷಕ ಹುದ್ದೆಗಳಿಗೆ 59 ಶಾಖಾಧಿಕಾರಿ ಹುದ್ದೆ ಸೃಷ್ಟಿ ಸರಿಯಲ್ಲ’ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.