ADVERTISEMENT

ಸುರ್ಜೇವಾಲ ಎದುರು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಡಗೈ ನಾಯಕರ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 11:47 IST
Last Updated 18 ಫೆಬ್ರುವರಿ 2021, 11:47 IST
   

ಬೆಂಗಳೂರು: ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ಮೇಲೆ ಒತ್ತಡ ಹೇರುವ ಪ್ರಯತ್ನ ಮುಂದುವರಿಸಿರುವ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎಚ್. ಆಂಜನೇಯ ಸೇರಿದಂತೆ ಎಡಗೈ ಸಮುದಾಯದ ನಾಯಕರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಅವರನ್ನು ಗುರುವಾರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಕುಮಾರಕೃಪಾ ಅತಿಥಿಗೃಹದಲ್ಲಿ ಸುರ್ಜೆವಾಲ ಅವರನ್ನು ಆಂಜನೇಯ, ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ, ವಿಧಾನಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪೂರ ಭೇಟಿ ಮಾಡಿ ಈ ಮನವಿ ಮಾಡಿದ್ದಾರೆ.

ಬಳಿಕ ಮಾತನಾಡಿದ ಆಂಜನೇಯ, ‘ಪರಿಶಿಷ್ಟ ಜಾತಿಯಲ್ಲಿ ನಾವು ಪ್ರಬಲ ಸಮುದಾಯ. ರಾಜ್ದಲ್ಲಿ ಎಡಗೈ ಸಮುದಾಯ ಹೆಚ್ಚಿದೆ, ಸುಮಾರು 60 ಲಕ್ಷ ಜನರಿದ್ದೇವೆ. ಹೀಗಾಗಿ ಕಾರ್ಯಾಧ್ಯಕ್ಷ ಸ್ಥಾನ ಕೇಳಿದ್ದೇವೆ. ಎಲ್ಲ ಸಮುದಾಯಗಳೀಗೂ ಅವಕಾಶ ಕೊಟ್ಟಿದ್ದೀರಿ. ನಮ್ಮ‌ ಸಮುದಾಯಕ್ಕೂ ಅವಕಾಶ ಕೊಡಿ. ನಮ್ಮ‌ ಸಮುದಾಯ ಹಿಂದಿನಿಂದಲೂ ಕಾಂಗ್ರೆಸ್ ಬೆಂಬಲಕ್ಕಿದೆ’ ಎಂದು ಮನವರಿಕೆ ಮಾಡಿದ್ದಾರೆ.

ADVERTISEMENT

‘ಸಮುದಾಯದ ಯಾರಿಗೆ ಬೇಕಾದರೂ ಅವಕಾಶ ಕೊಡಿ. ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದೇವೆ. ಅಧಿಕಾರಕ್ಕೆ ತರಲು ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಹೀಗಾಗಿ, ಕಾರ್ಯಾಧ್ಯಕ್ಷ ಸ್ಥಾನ ಕೇಳಿದ್ದೇವೆ ಅದಕ್ಕೆ ಸುರ್ಜೇವಾಲ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

ಸುರ್ಜೆವಾಲ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿ ಎಲ್. ಹನುಮಂತಯ್ಯ, ‘ಬಹುತೇಕ ಸಮುದಾಯಗಳಿಗೆ ಕಾರ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. ಮಾದಿಗ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಸ್ಥಾನ ನೀಡಬೇಕು. ಚುನಾವಣೆ ದೃಷ್ಟಿಯಿಂದ ಇದು ಪೂರಕವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.