ADVERTISEMENT

ಮುಖ್ಯಮಂತ್ರಿ ಕಚೇರಿ ಮುಂದೆ ಪ್ರತಿಭಟನೆಗೆ ಎಡ ಪಕ್ಷಗಳ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 19:14 IST
Last Updated 9 ಜೂನ್ 2021, 19:14 IST
ಸಿಪಿಐ(ಎಂ) ಕಾರ್ಯಕರ್ತರು–ಸಾಂದರ್ಭಿಕ ಚಿತ್ರ
ಸಿಪಿಐ(ಎಂ) ಕಾರ್ಯಕರ್ತರು–ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ನಿರ್ವಹಣೆ ನಿರ್ಲಕ್ಷ್ಯ ಖಂಡಿಸಿ ಮತ್ತು ಲಾಕ್‌ಡೌನ್ ಪರಿಹಾರ ಹೆಚ್ಚಳಕ್ಕೆ ಆಗ್ರಹಿಸಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರುಗಳು, ಶಾಸಕರ ಕಚೇರಿಗಳ ಎದುರುಜೂ.15ರಂದು ಪ್ರತಿಭಟನೆ ನಡೆಸಲು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ನಿರ್ಧರಿಸಿವೆ.

ಸಿಪಿಐ(ಎಂ) ಕಾರ್ಯದರ್ಶಿ ಯು. ಬಸವರಾಜ, ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‌ಯುಸಿಐ) ಕಾರ್ಯದರ್ಶಿ ಕೆ.ಉಮಾ, ಸಿಪಿಐ(ಎಂಎಲ್‌) ಕಾರ್ಯದರ್ಶಿ ಕ್ಲಿಪ್ಟನ್ ರೋಜಾರಿಯೋ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್‌(ಎಐಎಫ್‌ಬಿ) ಕಾರ್ಯದರ್ಶಿ ಜಿ.ಆರ್. ಶಿವಶಂಕರ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ(ಆರ್‌ಪಿಐ) ‌ಅಧ್ಯಕ್ಷ ಮೋಹನ್‌ರಾಜ್, ಸ್ವರಾಜ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ ಅವರು ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು.

‘ಮೇ 28ರಂದು ಆನ್‌ಲೈನ್ ಪ್ರತಿಭಟನಾ ಸಭೆ, ಜೂ.1ರಂದು ರಾಜ್ಯದಾದ್ಯಂತ 10 ಸಾವಿರಕ್ಕೂ ಹೆಚ್ಚು ಜನರು ತಮ್ಮ ಮನೆಗಳ ಎದುರು ಪ್ರತಿಭಟನೆ ನಡೆಸಿದರು. ಆದರೂ, ಜನರ ಹಕ್ಕುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಜೂ.14ರೊಳಗೆ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ’ ಎಂದು ಹೇಳಿದರು.

ADVERTISEMENT

ಕೋವಿಡ್‌ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ವಿವೇಚನಾ ರಹಿತ ಲಾಕ್‌ಡೌನ್ ಮಾಡುವ ಮೂಲಕ ದುಡಿಯುವ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು.

‘ಕೋವಿಡ್‌ ಸಂದರ್ಭದಲ್ಲಿ ಹಾಸಿಗೆ ಹಗರಣ, ಲಸಿಕೆ, ಆಮ್ಲಜನಕ ಹಗರಣ, ಜಾತಿ ತಾರತಮ್ಯವನ್ನು ಶಾಸಕರೇ ಮಾಡುತ್ತಿದ್ದಾರೆ. ಈ ರೀತಿಯ ಆರೋಪ ಇರುವ ಎಲ್ಲಾ ಶಾಸಕರ ರಾಜೀನಾಮೆ ಪಡೆಯಬೇಕು. ಎಲ್ಲರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಉಚಿತ ಲಸಿಕೆ ನೀಡಿಕೆಯನ್ನು ಕೂಡಲೇ ಆರಂಭಿಸಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳಿಗೆ ಆಹಾರ ಧಾನ್ಯ ಮತ್ತು ₹10 ಸಾವಿರ ನೆರವು ನೀಡಬೇಕು. ಹೊಲಗಳಲ್ಲೇ ಕೊಳೆತು ಹೋದ ಹೂವು, ಹಣ್ಣು, ಆಲೂಗಡ್ಡೆ, ಈರುಳ್ಳಿ ಬೆಳೆಗಳಿಗೆ ಎಕರೆಗೆ ಕನಿಷ್ಠ ₹25 ಸಾವಿರ ನೀಡಬೇಕು. ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯ ವೇತನ ಮತ್ತು ಉದ್ಯೋಗ ರಕ್ಷಿಸಲು ಅಗತ್ಯ ಆದೇಶ ಹೊರಡಿಸಬೇಕು. ಉದ್ಯೋಗ ಖಾತ್ರಿಯನ್ನು ವರ್ಷಕ್ಕೆ 200 ದಿನಗಳಿಗೆ ಹೆಚ್ಚಿಸಿ ನಗರ ಪ್ರದೇಶಕ್ಕೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.