ಪ್ರಲ್ಹಾದ ಜೋಶಿ
ಹುಬ್ಬಳ್ಳಿ: ‘ಧರ್ಮಸ್ಥಳದ ವಿಷಯದಲ್ಲಿ ಎಡಪಂಥೀಯರ ಷಡ್ಯಂತ್ರವಿದ್ದು, ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಪ್ರಜಾಭುತ್ವದ ಅಡಿ ನಾವು ತೀವ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಧರ್ಮಸ್ಥಳ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹಾಗೆ ಮಾನಸಿಕವಾಗಿ ದಾಳಿ ನಡೆಸಲಾಗುತ್ತಿದೆ. ಇದಕ್ಕಾಗಿ ಎಡಪಂಥೀಯಯರ ಟೂಲ್‌ಕಿಟ್ ಸಿದ್ಧವಾಗಿದೆ. ಈ ಕುರಿತು ಸರ್ಕಾರ ನಡೆದುಕೊಳ್ಳುವ ರೀತಿಯು ಸಹ ಆಕ್ಷೇಪಾರ್ಹವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಧರ್ಮಸ್ಥಳ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶವ ಹೂತು ಹಾಕಿದ್ದೇನೆಂದು ಸಾಕ್ಷಿ ದೂರುದಾರ ತೋರಿಸಿದ್ದು 13 ಜಾಗ. ಆದರೆ, ಈಗ 19 ಸ್ಥಳಗಳನ್ನು ಗುರುತು ಮಾಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಾಕ್ಷಿ ದೂರುದಾರ ರಾತ್ರಿ ಎಲ್ಲಿಯೋ ಹೋಗುತ್ತಾನೆ, ಬೆಳಿಗ್ಗೆ ಬಂದು ಒಂದೊಂದು ಜಾಗ ತೋರಿಸುತ್ತಾನೆ. ಇದಕ್ಕೆ ಸರ್ಕಾರ ಸಹ ಸೊಪ್ಪು ಹಾಕುತ್ತಿದೆ’ ಎಂದು ಆರೋಪಿಸಿದರು.
‘ಜನಸಾಮಾನ್ಯರು ಜಾನುವಾರು ಮೇಯಿಸಲು ಅರಣ್ಯ ಪ್ರದೇಶದೊಳಗೆ ಹೋದರೆ ಪ್ರಕಣ ದಾಖಲಿಸುವ ಅರಣ್ಯ ಇಲಾಖೆ, ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅರಣ್ಯ ಪ್ರದೇಶದಲ್ಲಿ ಮಣ್ಣು ತೆಗೆದು ಉತ್ಖನನ ನಡೆಸಲು ಅನುಮತಿ ಪಡೆಯಲಾಗಿದೆಯೇ? ಈ ಹಿಂದೆ ಶಬರಿಮಲೆ, ತಿರುಪತಿಯಲ್ಲೂ ಹೀಗೆಯೇ ಆರೋಪ ಮಾಡಿ ಹಿಂದೂಗಳ ಭಾವನೆಗೆ ಘಾಸಿ ಮಾಡಲಾಗಿತ್ತು. ಅನ್ಯ ಧರ್ಮದವರ ಧಾರ್ಮಿಕ ಕೇಂದ್ರದಲ್ಲೂ ಶವ ಹೂತಿದ್ದೇವೆ ಎಂದು ಯಾರಾದರೂ ಆರೋಪಿಸಿದರೆ, ಅಲ್ಲಿ ಉತ್ಖನನ ಮಾಡುವ ತಾಕತ್ತು ಸರ್ಕಾರಕ್ಕೆ ಇದೆಯೇ’ ಎಂದು ಪ್ರಶ್ನಿಸಿದರು.
‘ಬೆಂಗಳೂರನ್ನು ದೇಶದ ರಾಜಧಾನಿಯನ್ನಾಗಿ ಘೋಷಿಸಬೇಕು’ ಎನ್ನುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ‘ಮುಂಬೈ, ದೆಹಲಿ, ಬೆಂಗಳೂರು, ಚೆನೈ ನಗರಗಳು ಸೇರಿದಂತೆ ಬಹುತೇಕ ನಗರಗಳು ಆರ್ಥಿಕವಾಗಿ ಸದೃಢವಾಗುತ್ತಿವೆ. ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿವೆ. ಕೇಂದ್ರ ಸರ್ಕಾರವು ಸಹ ಎಲ್ಲ ನಗರ ಹಾಗೂ ರಾಜ್ಯಗಳಿಗೂ ಅನುದಾನವನ್ನು ಸಮರ್ಪಕವಾಗಿ ಹಂಚುತ್ತಿದೆ. ಹೀಗಿದ್ದಾಗ, ಬೆಂಗಳೂರನ್ನು ದೇಶದ ರಾಜಧಾನಿಯನ್ನಾಗಿ ಮಾಡಬೇಕೆನ್ನುವ ಡಿಕೆಶಿ ಹೇಳಿಕೆಗೆ ಹೆಚ್ಚು ಅರ್ಥನೀಡಬೇಕಿಲ್ಲ‘ ಎಂದು ಹೇಳಿದರು.
‘ಮತಕಳವು ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಚುನಾವಣಾ ಆಯೋಗ ದೂರು ನೀಡಿ ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದರೂ, ಭದ್ರತೆ ನೆಪವೊಡ್ಡಿ ದೆಹಲಿಗೆ ಹೋದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆಯೇ ಆರೋಪ ಮಾಡುವ ಅಪ್ರಬುದ್ಧ ನಕಲಿ ಗಾಂಧಿ ಮನೆತನದ ವ್ಯಕ್ತಿ ಅವರು’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.