ADVERTISEMENT

ಕೋವಿಡ್‌: ನೊಂದವರಿಗೆ ಉಚಿತ ಕಾನೂನು ನೆರವು

ಧ್ವನಿ ಲೀಗಲ್ ಟ್ರಸ್ಟ್‌ನಿಂದ ಪೋರ್ಟಲ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 19:13 IST
Last Updated 12 ಜೂನ್ 2021, 19:13 IST
ಧ್ವನಿ ಲೀಗಲ್ ಟ್ರಸ್ಟ್
ಧ್ವನಿ ಲೀಗಲ್ ಟ್ರಸ್ಟ್   

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನೊಂದವರಿಗೆ ಸಹಾಯ ಮಾಡಲು ‘ಧ್ವನಿ ಲೀಗಲ್ ಟ್ರಸ್ಟ್‌’ ಕಾನೂನು ನೆರವು ಪೋರ್ಟಲ್ ತೆರೆದಿದೆ.

ಕರ್ನಾಟಕ ಜನಾರೋಗ್ಯ ಚಳವಳಿ(ಕೆಜೆಸಿ) ಮತ್ತು ಕರ್ನಾಟಕ ಕೋವಿಡ್ ಸ್ವಯಂ ಸೇವಕರ ತಂಡದ (ಕೆಸಿವಿಟಿ) ಸಹಯೋಗದಲ್ಲಿ ದೂರವಾಣಿ ಮತ್ತು ಆನ್‌ಲೈನ್ ಮೂಲಕ ಕೋವಿಡ್ ಸಂಬಂಧಿತ ವಿಷಯಗಳಿಗೆ ನಿರ್ದಿಷ್ಟ ಕಾನೂನು ನೆರವನ್ನು ಈ ಸಂಸ್ಥೆ ನೀಡುತ್ತಿದೆ.

‘ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಮಕ್ಕಳ ಮೇಲಿನ ದೌರ್ಜನ್ಯ, ವೈದ್ಯಕೀಯ ನಿರ್ಲಕ್ಷ್ಯ, ಚಿಕಿತ್ಸೆಯ ನಿರಾಕರಣೆ, ಆಸ್ಪತ್ರೆಗಳಲ್ಲಿ ಹಣ ಕೊಡದೆ ಶವ ನೀಡಲು ನಿರಾಕರಣೆ, ಶವಸಂಸ್ಕಾರದ ಸಮಯದಲ್ಲಿನ ಕಾನೂನು ತೊಡಕು, ಮನೆ ಬಾಡಿಗೆ ಸಮಸ್ಯೆ(ಮನೆ ಮಾಲೀಕರಿಂದ ಕಿರುಕುಳ, ಹೊರ ಹಾಕುವಿಕೆ), ಉದ್ಯೋಗ ಸಂಬಂಧಿತ ವಿಷಯಗಳು (ಅಮಾನತು, ಅಕ್ರಮ ವರ್ಗಾವಣೆ, ಸಂಬಳ ಪಾವತಿ ನಿರಾಕರಣೆ), ಹೆಚ್ಚುವರಿ ಶುಲ್ಕ ಕೋರುವ ಶಾಲೆಗಳು ಮತ್ತು ವ್ಯಾಪಾರ ವಿವಾದಗಳಲ್ಲಿ ಕಾನೂನು ನೆರವು ನೀಡಲಾಗುತ್ತಿದೆ’ ಎಂದು ಟ್ರಸ್ಟ್‌ನ ಸಂಸ್ಥಾಪಕಿ ಅಶ್ವಿನಿ ಓಬಳೇಶ್ ತಿಳಿಸಿದರು.

ADVERTISEMENT

ರಾಜ್ಯದಲ್ಲಿ 35 ವಕೀಲ ಸ್ವಯಂ ಸೇವಕರನ್ನು ಟ್ರಸ್ಟ್ ಹೊಂದಿದೆ. ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಅವರು ತಮ್ಮ ಸಮಯ ಮತ್ತು ಶ್ರಮ ಎರಡನ್ನೂ ವ್ಯಯಿಸುತ್ತಿದ್ದಾರೆ ಎಂದು ಹೇಳಿದರು.

ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯಲ್ಲಿ(ಎನ್‌ಎಲ್‌ಎಸ್‌ಐಯು) 2013ರಲ್ಲಿ ಕಾನೂನು ಪದವಿ ಪಡೆದಿರುವ ಅಶ್ವಿನಿ ಓಬಳೇಶ್ ಅವರು ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದ್ದಾರೆ. ದುರ್ಬಲರಿಗೆ ಉಚಿತವಾಗಿ ಕಾನೂನಿನ ನೆರವು ನೀಡಲು ಧ್ವನಿ ಲೀಗಲ್ ಟ್ರಸ್ಟ್ ಅನ್ನು ಅವರು ಎರಡು ವರ್ಷದಿಂದ ಆರಂಭಿಸಿದ್ದಾರೆ.

ಕಾನೂನಿನ ನೆರವು ಪಡೆಯಲು 86603–90464ಗೆ ಕರೆ ಮಾಡಬಹುದು ಎಂದು ಅಶ್ವಿನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.