ADVERTISEMENT

ಶಿವಮೂರ್ತಿ ಮುರುಘಾ ಶರಣರ ಪದಚ್ಯುತಿಗೆ ಕಾನೂನು ಹೋರಾಟ: ಮಾಜಿ ಸಚಿವ ಎಚ್‌.ಏಕಾಂತಯ್ಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 14:29 IST
Last Updated 19 ಜೂನ್ 2023, 14:29 IST
ಶಿವಮೂರ್ತಿ ಮುರುಘಾ ಶರಣರ
ಶಿವಮೂರ್ತಿ ಮುರುಘಾ ಶರಣರ   

ಚಿತ್ರದುರ್ಗ: ನೀತಿ ಭ್ರಷ್ಟತೆಯ ಗುರುತರ ಆರೋಪ ಹೊತ್ತು ಜೈಲು ಸೇರಿರುವ ಶಿವಮೂರ್ತಿ ಮುರುಘಾ ಶರಣರನ್ನು ಪೀಠಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವಂತೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಎಚ್‌.ಏಕಾಂತಯ್ಯ ತಿಳಿಸಿದರು.

‘ಮುರುಘಾ ಮಠಕ್ಕೆ ಸರ್ಕಾರ ಮಾಡಿದ್ದ ಆಡಳಿತಾಧಿಕಾರಿ ನೇಮಕ ಶಾಶ್ವತ ಪರಿಹಾರ ಆಗಲಾರದು. ಶರಣರು ಆರೋಪ ಮುಕ್ತರಾಗುವವರೆಗೆ ಮಠದ ಪರಂಪರೆಗೆ ಅನುಸಾರವಾಗಿ ನೂತನ ಸ್ವಾಮೀಜಿ ನೇಮಕ ಆಗಬೇಕಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘1923 ಜೂನ್ 6 ರಂದು ಅಂದಿನ ಗುರುಗಳು ಟ್ರಸ್ಟ್‌ ರಚಿಸಿದ್ದರು. ಆದರೆ, ಇದು ನೋಂದಣಿ ಆಗಿರಲಿಲ್ಲ. 2010ರ ನ.26ರಂದು ಶಿವಮೂರ್ತಿ ಶರಣರು ಏಕವ್ಯಕ್ತಿ ಟ್ರಸ್ಟ್‌ ರಚಿಸಿ ನೋಂದಣಿ ಮಾಡಿದರು. ಟ್ರಸ್ಟ್‌ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಶರಣರು ನಡೆದುಕೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಮಠದ ಆಸ್ತಿ ಮಾರಾಟ

‘ಬೆಂಗಳೂರಿನ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದ ಸರ್ವೆ ನಂಬರ್‌ 34 ರಲ್ಲಿದ್ದ 7 ಎಕರೆ 18 ಗುಂಟೆ ಭೂಮಿಯನ್ನು 2008ರಲ್ಲಿ ಆನಂದಕುಮಾರ್ ಎಂಬುವರಿಗೆ ಮಾರಾಟ ಮಾಡಲಾಗಿದೆ. ಈ ಆಸ್ತಿಗೆ ಉಪನೋಂದಣಾಧಿಕಾರಿ ಕಚೇರಿ ₹ 3.57 ಕೋಟಿ ಮಾರ್ಗಸೂಚಿ ಬೆಲೆ ನಿಗದಿ ಮಾಡಿತ್ತು. ಮಾರ್ಗಸೂಚಿ ಬೆಲೆಗೆ ನೋಂದಣಿ ಶುಲ್ಕ ಪಾವತಿಯಾಗಿದ್ದರೂ ₹ 79 ಲಕ್ಷಕ್ಕೆ ಆಸ್ತಿ ಮಾರಾಟವಾಗಿದೆ’ ಎಂದು ಆರೋಪಿಸಿದರು.

‘ಹಾವೇರಿ ನಗರ ವ್ಯಾಪ್ತಿಯ ಸರ್ವೆ ನಂಬರ್‌ 229 ರಲ್ಲಿ ಮಠಕ್ಕೆ ಸೇರಿದ 21 ಎಕರೆ 12 ಗುಂಟೆ ಜಮೀನು ಇತ್ತು. ಈ ಆಸ್ತಿಯನ್ನು 3 ಎಕರೆ 22 ಗುಂಟೆಯಂತೆ ಆರು ಜನರಿಗೆ ಮಾರಾಟ ಮಾಡಲಾಗಿದೆ. 3.22 ಎಕರೆ ಜಮೀನಿಗೆ ಉಪನೋಂದಣಾಧಿಕಾರಿ ಕಚೇರಿ ಮಾರ್ಗಸೂಚಿ ಬೆಲೆ ₹ 10.65 ಲಕ್ಷ ಇತ್ತು. ಆದರೆ, ಮಠ ಇದನ್ನು ₹ 4.75 ಲಕ್ಷಕ್ಕೆ ಮಾರಾಟ ಮಾಡಿದೆ. ಹೀಗೆ ಆಸ್ತಿ ಖರೀದಿಸಿದ ಎಲ್ಲರೂ ಶಿವಮೂರ್ತಿ ಶರಣರ ಶಿಷ್ಯಂದಿರು. ಇವರೇ ಶರಣರನ್ನು ಉಳಿಸಲು ಹೋರಾಟ ಮಾಡುತ್ತಿದ್ದಾರೆ’ ಎಂದು ದೂರಿದರು.

ದಾನದ ಭೂಮಿ ದುರುಪಯೋಗ

‘ಬೆಳ್ಳುಳ್ಳಿ ಮುರಿಗೆಪ್ಪ ವಂಶಸ್ಥರು 1940ರಲ್ಲಿ ಜಯದೇವ ಸ್ವಾಮೀಜಿ ಅವರಿಗೆ ದಾವಣಗೆರೆಯಲ್ಲಿ ಭೂಮಿಯನ್ನು ದಾನ ಮಾಡಿದ್ದರು. ಇದು 24,368 ಚದರ ಅಡಿ ನಿವೇಶನವಾಗಿದ್ದು, 2008ರಲ್ಲಿ ನಾಲ್ಕು ಜನರಿಗೆ ಮಾರಾಟ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಕೊಟ್ಟಿದ ಭೂಮಿಯನ್ನು ಶರಣರು ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.

‘ಚಿತ್ರದುರ್ಗದ ಎಸ್‌ಜೆಎಂ ಕಾಲೇಜು ಬಳಿ 6.32 ಎಕರೆ ಭೂಮಿಯನ್ನು ಜಯದೇವ ಸ್ವಾಮೀಜಿ ಖರೀದಿಸಿದ್ದರು. ಕಾಲೇಜು ಕಟ್ಟಡ ಹಾಗೂ ಆಟದ ಮೈದಾನಕ್ಕೆ ಈ ಭೂಮಿಯನ್ನು ಪರಿವರ್ತನೆ ಮಾಡಲಾಗಿತ್ತು. ಆಟದ ಮೈದಾನಕ್ಕೆ ಪರಿವರ್ತನೆಯಾಗಿದ್ದ ಸ್ಥಳದಲ್ಲಿ 21 ನಿವೇಶನಗಳನ್ನು 2009ರಲ್ಲಿ ಅಭಿವೃದ್ಧಿಪಡಿಸಿ ಮಾರಾಟ ಮಾಡಲಾಗಿದೆ. ಮಠಾಧೀಶರು ರಿಯಲ್‌ ಎಸ್ಟೇಟ್‌ ಉದ್ಯಮಿ ಆಗುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಹೆಲಿಕಾಪ್ಟರ್‌ ಅನ್ಯ ಉದ್ದೇಶಕ್ಕೆ ಬಳಕೆ’

ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪರವಾಗಿ 2020ರ ಅ.2ರಂದು ತುಂಬೆ ಏವಿಯೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯೊಂದಿಗೆ ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಪರಮಶಿವಯ್ಯ ಏರ್ ಆಂಬುಲೆನ್ಸ್‌ಗೆ ಒಪ್ಪಂದ ಮಾಡಿಕೊಂಡಿದ್ದರು. ಈ ಹೆಲಿಕಾಪ್ಟರ್‌ನಲ್ಲಿ ಶರಣರು 92 ಗಂಟೆ ಪ್ರಯಾಣ ಮಾಡಿದ್ದು ಬಿಟ್ಟರೆ ವೈದ್ಯಕೀಯ ಉದ್ದೇಶಕ್ಕೆ ಬಳಕೆಯಾಗಿಲ್ಲ ಎಂದು ಎಚ್.ಏಕಾಂತಯ್ಯ ಆರೋಪಿಸಿದರು.

‘ಹೆಲಿಕಾಪ್ಟರ್‌ಗೆ ₹ 3 ಕೋಟಿಯನ್ನು ಬಡ್ಡಿರಹಿತವಾಗಿ ಖಾಸಗಿ ಸಂಸ್ಥೆಯಲ್ಲಿ ಠೇವಣಿ ಇಡಲಾಗಿದೆ. ಶರಣರ ಹೆಲಿಕಾಪ್ಟರ್‌ ಸಂಚಾರಕ್ಕೆ ₹ 1.14 ಕೋಟಿ ಖರ್ಚು ಮಾಡಲಾಗಿದೆ. ಆಸ್ಪತ್ರೆಯ ವೈದ್ಯಕೀಯ ತುರ್ತು ಅಗತ್ಯಕ್ಕೆ ಬಳಕೆ ಮಾಡಿಕೊಳ್ಳಲು ಹೆಲಿಕಾಪ್ಟರ್‌ ಪಡೆದು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ಇದಕ್ಕೆ ಉತ್ತರ ನೀಡುವವರು ಯಾರು’ ಎಂದು ಪ್ರಶ್ನಿಸಿದರು.

ದಾವಣಗೆರೆ ವಿರಕ್ತ ಮಠದಲ್ಲಿಯೂ ಅವ್ಯವಹಾರ ನಡೆದಿದೆ. ಬಸವಪ್ರಭು ಸ್ವಾಮೀಜಿ ಅಡಗೂರು ಮಠದಲ್ಲಿ 2022ರ ನ.30ರಂದು ಪಡೆದ ₹ 6 ಲಕ್ಷವನ್ನು ಇನ್ನೂ ಮಠದ ಖಾತೆಗೆ ಜಮಾ ಮಾಡಿಲ್ಲ.
ಎಚ್‌.ಏಕಾಂತಯ್ಯ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.