ADVERTISEMENT

ಚಿರತೆ ದಾಳಿಗೆ ಆಕಳು ಬಲಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:30 IST
Last Updated 8 ನವೆಂಬರ್ 2018, 20:30 IST
ಹರಪನಹಳ್ಳಿ ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೃತಪಟ್ಟ ಆಕಳು
ಹರಪನಹಳ್ಳಿ ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೃತಪಟ್ಟ ಆಕಳು   

ಹರಪನಹಳ್ಳಿ: ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ನಸುಕಿನ ಜಾವ ಚಿರತೆ ದಾಳಿಗೆ ಆಕಳು ಮೃತಪಟ್ಟಿದೆ.

ಗುರಸ್ತರ ಚನ್ನವೀರಪ್ಪ ಅವರಿಗೆ ಸೇರಿದ 6 ವರ್ಷದ ಆಕಳು ಇದಾಗಿದೆ. ಗ್ರಾಮದ ಮಧ್ಯದಲ್ಲಿರುವ ಕಣದಲ್ಲಿ ಕಟ್ಟಿ ಹಾಕಿದ್ದ ವೇಳೆ ದಾಳಿ ನಡೆಸಿ ಅರ್ಧಭಾಗವನ್ನು ತಿಂದು ಚಿರತೆ ಕಾಲ್ಕಿತ್ತಿದೆ. 15 ದಿನಗಳ ಹಿಂದೆ ಕುರಿಹಿಂಡಿನ ಮೇಲೆ ದಾಳಿ ನಡೆಸಿದ್ದ ಚಿರತೆ ಕುರಿ ಹೊತ್ತೊಯ್ದಿತ್ತು. ಕುರಿಗಾಹಿ ರಕ್ಷಣೆ ಮಾಡಿದರಾದರೂ ಕುರಿ ಮೃತಪಟ್ಟಿತ್ತು.

ಗ್ರಾಮದ ಚೌಟ್ಗಿ ಪರಸಪ್ಪ ಮತ್ತು ಹಳ್ಳಿ ಶಿವಪ್ಪ ಅವರ ತಲಾ ಮೂರು ಕುರಿ, ಗಿರಿಯಪ್ಪರ ಜಯಪ್ಪ, ದುರಗಪ್ಪ, ಚೌಟ್ಗಿ ಸಣ್ಣ ರಾಮಪ್ಪ ಅವರ ತಲಾ ಎರಡು ಕುರಿ, ಹಡಗಲಿ ಸ್ವಾಮಿಲಿಂಗಪ್ಪ ಹಾಗೂ ಮಲ್ಲಪ್ಪನವರ ಚಿನ್ನಪ್ಪ ಅವರ ತಲಾ ಒಂದು ಕುರಿ ಸೇರಿ 14 ಕುರಿಗಳನ್ನು ಒಂದೂವರೆ ತಿಂಗಳಲ್ಲಿ ಚಿರತೆ ತಿಂದು ಹಾಕಿದೆ ಎಂದು ಕುರಿಗಾಹಿಗಳು ತಿಳಿಸಿದ್ದಾರೆ.

ADVERTISEMENT

‘ಚಿರತೆ ಆಹಾರ ಅರಸಿ ಗ್ರಾಮಕ್ಕೆ ನುಗ್ಗುತ್ತಿದೆ. ಗ್ರಾಮದ ಹೊರವಲಯದಲ್ಲಿ ಕಟ್ಟುವ ದನಕರ, ಕುರಿಗಳ ಮೇಲೆ ರಾತ್ರಿ ವೇಳೆ ಚಿರತೆ ದಾಳಿ ನಡೆಸುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯವರ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಗ್ರಾಮಸ್ಥರು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.