ಬೆಂಗಳೂರು: ‘ಸಂವಿಧಾನ ಬದಲಾವಣೆಯ ಮಾತು ಆಡಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು. ಹೆಗಡೆ ಅವರ ಅಭಿಪ್ರಾಯವನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪದೆ ಇದ್ದರೆ, ಹೆಗಡೆಯವರನ್ನು ಪಕ್ಷದಿಂದಲೇ ಕಿತ್ತುಹಾಕಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
‘ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು’ ಎಂದು ಅನಂತಕುಮಾರ್ ಹೆಗಡೆ ಕರೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆ ಅಲ್ಲ. ಬಿಜೆಪಿಯ ರಹಸ್ಯ ಕಾರ್ಯಸೂಚಿಯ ಭಾಗ’ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.
‘ನಮ್ಮ ಸಂವಿಧಾನ ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುತ್ತದೆ. ಸಂವಿಧಾನವನ್ನೇ ಬದಲಿಸಿ ಅನಂತಕುಮಾರ್ ಹೆಗಡೆ ಯಾವ ಹಿಂದೂ ಧರ್ಮವನ್ನು ರಕ್ಷಿಸಲು ಹೊರಟಿದ್ದಾರೆ? ಹೆಗಡೆಯವರ ಹೇಳಿಕೆ ಗಮನಿಸಿದರೆ ಅಂಬೇಡ್ಕರ್ ರಚಿಸಿ ಕೊಟ್ಟ ಸಂವಿಧಾನಕ್ಕಿಂತ ಮೊದಲು ಇದ್ದ ಮನು ಪ್ರಣೀತ ಸಂವಿಧಾನವನ್ನು ಜಾರಿಗೊಳಿಸುವ ದುಷ್ಟ ಆಲೋಚನೆ ಹೆಗಡೆ ಮತ್ತು ಅವರ ಪಕ್ಷಕ್ಕೆ ಇದೆ ಎನ್ನುವುದು ಸ್ಪಷ್ಟ’ ಎಂದಿದ್ದಾರೆ.
‘ಸಂವಿಧಾನ ಬದಲಾಯಿಸಬೇಕು, ಬದಲಾಯಿಸುವುದೇ ನಮ್ಮ ಉದ್ದೇಶ’ ಎಂದೆಲ್ಲಾ ಹೆಗಡೆ ಆಗಾಗ ವಿಷಕಾರುತ್ತಲೇ ಇದ್ದಾರೆ. ಬಿಜೆಪಿ ವರಿಷ್ಠರು ಪರೋಕ್ಷವಾಗಿ ಬೆಂಬಲಿಸುತ್ತಾ ಬಂದಿರುವುದನ್ನು ನೋಡಿದರೆ ಪಕ್ಷ ಮತ್ತು ಪ್ರಧಾನಿ ಮೋದಿ ಅವರ ಬೆಂಬಲ ಅವರಿಗೆ ಇದೆ ಎನ್ನುವುದು ಸ್ಪಷ್ಟ‘ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.