ಬೆಂಗಳೂರು: ‘ತಮ್ಮನ್ನು ಚುನಾವಣೆಯಲ್ಲಿ ಸೋಲಿಸಿದ್ದು ಆರ್‌ಎಸ್‌ಎಸ್ ಮತ್ತು ಸಾವರ್ಕರ್ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಸಾಬೀತು ಮಾಡಲಿ. ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಲಿ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.
ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಯರಾಂ ರಮೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಪದೇ ಪದೇ ಈ ವಿಷಯ ಪ್ರಸ್ತಾಪಿಸಿದ್ದಾರೆ. ಅಂಬೇಡ್ಕರ್ ಅವರೇ ಈ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಹೇಳುತ್ತಾರೆ. ಆ ಪತ್ರವನ್ನು ತೆಗೆದುಕೊಂಡು ಈ ನಾಲ್ವರೂ ಚರ್ಚೆಗೆ ಬರಲಿ’ ಎಂದರು.
‘ಈ ನಾಲ್ವರೂ, ಅಂಬೇಡ್ಕರ್ ಅವರು ಹಾಗೆ ಹೇಳಿದ್ದಾರೆ ಎಂದು ಸಾಬೀತು ಮಾಡಿದರೆ ನಾನು ರಾಜಕೀಯದಿಂದ ನಿವೃತ್ತಿಯಾಗಲು ಸಿದ್ದ. ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಪ್ರಿಯಾಂಕ್ ಖರ್ಗೆ ಡಬಲ್ ಎಂಜಿನ್ ಸುಳ್ಳುಗಾರರು. ಅವರಿಂದ ದಲಿತರಿಗೆ ಅನ್ಯಾಯವೇ ಆಗಿದೆ. ಕಾಂಗ್ರೆಸ್‌ನಿಂದ ಸಂವಿಧಾನ ರಕ್ಷಣೆ ಸಾಧ್ಯವಿಲ್ಲ’ ಎಂದರು.
‘ಮೀಸಲಾತಿಯನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರೋಧಿಸಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾವು ಯಾವಾಗ ವಿರೋಧಿಸಿದ್ದೆವು ಎಂಬುದನ್ನು ಹೇಳಲಿ. ಮೀಸಲಾತಿ ಪರ ಎನ್ನುವ ಕಾಂಗ್ರೆಸ್ ಸರ್ಕಾರಕ್ಕೆ, ರಾಜ್ಯದಲ್ಲಿ ಇನ್ನೂ ಒಳಮೀಸಲಾತಿ ಜಾರಿಗೆ ತರಲು ಸಾಧ್ಯವಾಗಿಲ್ಲ’ ಎಂದರು.
‘ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪೊಲೀಸರೇ ಮಾಹಿತಿ ನೀಡಿದಂತಿದೆ. ಹತ್ಯೆಯ ಹಿಂದಿನ ದಿನ ಸುಹಾಸ್‌ಗೆ ಬೆದರಿಕೆ ಬಂದಿತ್ತು. ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ರಕ್ಷಣೆಗಾಗಿ ಸುಹಾಸ್ ಇರಿಸಿಕೊಂಡಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರಿಗೆ ಪೊಲೀಸರು ರಕ್ಷಣೆ ನೀಡುವ ಬದಲು ಹಂತಕರಿಗೆ ನೆರವು ನೀಡಿದಂತಿದೆ’ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ‘ಹತ್ಯೆಗೆ ಸಂಬಂಧಿಸಿದಂತೆ ತಕ್ಷಣದಲ್ಲೇ ಎಫ್‌ಐಆರ್ ದಾಖಲಿಸಿಲ್ಲ. ಇಬ್ಬರು ಹಿಂದೂಗಳನ್ನು ಬಂಧಿಸಿ ಆನಂತರ ದಾಖಲಿಸಲಾಗಿದೆ. ಹಿಂದೂಗಳಿಬ್ಬರ ಹೆಸರನ್ನು ಸೇರಿಸುವ ಉದ್ದೇಶದಿಂದಲೇ ಎಫ್‌ಐಆರ್ ದಾಖಲು ಮಾಡುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹತ್ಯೆ ಬೆದರಿಕೆ ಹಾಕಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದುಬಿದ್ದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.